ಬೆಂಗಳೂರು: ಮುಡಾ ಸೈಟು ಹಗರಣದಲ್ಲಿ ಸಿಲುಕಿಕೊಂಡಿರುವ ಸಿಎಂ ಸಿದ್ದರಾಮಯ್ಯ ಇದೀಗ ಕೆಲವೇ ಕ್ಷಣಗಳಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಲಿದ್ದಾರೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಇದಾದ ಬಳಿಕ ಇದೇ ಮೊದಲ ಬಾರಿಗೆ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಹೈಕಮಾಂಡ್ ಜೊತೆಗೆ ಮುಡಾ ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಮನವರಿಕೆ ಮಾಡಿಕೊಡಲಿದ್ದು, ಬೆಂಬಲ ಕೋರಲಿದ್ದಾರೆ.
ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ಕೊಡುವ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ಇಂಡಿಯಾ ಒಕ್ಕೂಟದ ನಾಯಕರೆಲ್ಲಾ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಲು ಬೆಂಬಲ ಕೋರಲಿದ್ದಾರೆ. ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ್ ಕೂಡಾ ಜೊತೆಯಾಗುತ್ತಿದ್ದಾರೆ.
ಇನ್ನು ಪ್ರಕರಣವನ್ನು ಎದುರಿಸುವ ಬಗ್ಗೆ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಈ ಪ್ರಕರಣದಲ್ಲಿ ಸಿದ್ದು ಪರ ಕಪಿಲ್ ಸಿಬಲ್ ವಕಾಲತ್ತು ವಹಿಸುವ ಸಾಧ್ಯತೆಯಿದೆ. ಇನ್ನು, ದೆಹಲಿಗೆ ಹೋಗುವ ಬಗ್ಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಪರಮೇಶ್ವರ್, ಮುಡಾ ಹಗರಣದ ಬಗ್ಗೆ ಚರ್ಚೆ ಮಾಡಲು ಹೋಗುತ್ತಿಲ್ಲ. ಬೇರೆ ಕೆಲಸಕ್ಕೆ ಕರೆದಿದ್ದಾರೆ. ಏನು ಅಂತ ಅಲ್ಲಿಗೆ ಹೋದ ಬಳಿಕ ಗೊತ್ತಾಗಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.