ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಅವರ ಮಾವ, ಬಿಜೆಪಿ ಮುಖಂಡ ರಾಮಚಂದ್ರ ಅವರ ರಾಜರಾಜೇಶ್ವರಿನಗರದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ನಿನ್ನೆ ತಡರಾತ್ರಿ ದಾಳಿ ನಡೆಸಿದ್ದಾರೆ.
ಇದು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ತಡೆಯುವ ಹುನ್ನಾರ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಮಂಜುನಾಥ್ ಹೇಳಿದರು.
ರಾಜರಾಜೇಶ್ವರಿನಗರದ ರಾಮಚಂದ್ರ ಅವರ ನಿವಾಸದ ಮೇಲೆ ನಿನ್ನೆ ರಾತ್ರಿ ೧೦ ಗಂಟೆ ಸುಮಾರಿಗೆ ದಾಳಿ ನಡೆದಿದ್ದು, ಮುಂಜಾನೆಯವರೆಗೂ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಡಾ.ಮಂಜುನಾಥ್ ಅವರು ಎಕ್ಸ್ ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರಾಜರಾಜೇಶ್ವರಿ ನಗರದಲ್ಲಿ ನಮ್ಮ ಪಕ್ಷದ ಸದಸ್ಯರು ಹಾಗೂ ಮಾಜಿ ನಗರಸಭಾ ಸದಸ್ಯರಾದ ಶ್ರೀ ಜಿ.ಹೆಚ್. ರಾಮಚಂದ್ರ ಅವರು ಹಾಗೂ ಜಗದೀಶ್ ಆರ್ ಚಂದ್ರ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ತಡೆಯುವ ದುರುದ್ದೇಶದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು, ಅವರ ಮನೆಯ ಮೇಲೆ ರೇಡ್ ಮಾಡಿರುವುದನ್ನು ಖಂಡಿಸುತ್ತೇನೆ.
ಜಿ.ಹೆಚ್. ರಾಮಚಂದ್ರ ಅವರ ಬಳಿ ಖುದ್ದು ಮಾತನಾಡಿದಾಗ ಸುಮಾರು ವಾರಗಳಿಂದ ಅನೇಕ ರೀತಿಯಲ್ಲಿ ಆಮಿಷಗಳನ್ನು ಒಡ್ಡಿ, ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಂತೆ ಮಾಡಲು ಪ್ರಯತ್ನ ನಡೆಸಿದ್ದರು ಎಂದು ತಿಳಿಸಿದರು.
ಇಂತಹ ಆಧಾರ ರಹಿತ ರೇಡ್‌ಗಳ ಮೂಲಕ ನಮ್ಮ ಪಕ್ಷದ ಕಾರ್ಯಕರ್ತರ ಸಮಯ ವ್ಯರ್ಥ ಮಾಡುವ ಜತೆ ಚುನಾವಣೆಯಲ್ಲಿ ತೊಡಗಿಕೊಳ್ಳದಂತೆ ತಡೆಯಲು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟು ಇಂತಹ ದಬ್ಬಾಳಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನನ್ನ ಆಗ್ರಹ
ದಯವಿಟ್ಟು ಇಂತಹ ದಬ್ಬಾಳಿಕೆಯ ರಾಜಕಾರಣವನ್ನು ಬಿಟ್ಟು, ಸರಿಯಾದ ಮಾರ್ಗದಲ್ಲಿ ಚುನಾವಣೆ ನಡೆಸೋಣ ಎಂದು ನಮ್ಮ ಕಾಂಗ್ರೆಸ್ ಮಿತ್ರರಲ್ಲಿ ಕೇಳಿಕೊಳ್ಳುತ್ತೇನೆ.