ಮೈಸೂರು: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರಾಜವಂಶಸ್ಥ ಯದುವೀರ್ ಒಡೆಯರ್ ವಿರುದ್ಧ ರಾಜ್ಯ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಯದುವೀರ್ ಒಡೆಯರ್ ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ರಾಜಕೀಯದಲ್ಲಿ ಅವರಿಗೆ ಅನುಭವ ಹೊಸದು. ಹಾಗಿದ್ದರೂ ತಮ್ಮ ಕ್ಷೇತ್ರದಲ್ಲಿ ಓಡಾಡುತ್ತಾ ಜನರೊಂದಿಗೆ ಬೆರೆತು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ನಡುವೆ ಕಾಂಗ್ರೆಸ್ ಅವರ ವಿರುದ್ಧ ಹಣ, ಸೀರೆ, ಪುಸ್ತಕ ಇತ್ಯಾದಿಗಳನ್ನು ಹಂಚಿ, ಆಮಿಷವೊಡ್ಡಿದ ಆರೋಪ ಹೊರಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಯದುವೀರ್ ಒಡೆಯರ್ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾವಿತರಾಗಿರುವ ಕೆಲವು ವ್ಯಕ್ತಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಯದುವೀರ್ ಸೋಷಿಯಲ್ ಮೀಡಿಯಾ ಪ್ರಭಾವಿಗಳಿಗೆ ಹಣ, ಸೀರೆ, ಪುಸ್ತಕ, ಪೆನ್ನು ಹಂಚಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ತಮ್ಮ ಪರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲು ಯದುವೀರ್ ಈ ರೀತಿ ಅಮಿಷವೊಡ್ಡಿರುವುದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಇದಕ್ಕೆ ಪುರಾವೆಯಾಗಿ ಫೋಟೋಗಳು ನಮ್ಮ ಬಳಿಯಿದೆ. ಹೀಗಾಗಿ ಯದುವೀರ್ ಒಡೆಯರ್ ವಿರುದ್ಧ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.