ಮೇಕೆದಾಟು ಪಾದಯಾತ್ರೆಗೆ ಕೊರೊನಾ ಬ್ರೇಕ್

ಭಾನುವಾರ, 2 ಜನವರಿ 2022 (14:21 IST)
ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ಆಯೋಜಿಸಲಾಗಿರುವ ಪಾದಯಾತ್ರೆ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಜನವರಿ 4 ರಂದು ಹಿರಿಯ ನಾಯಕರ ಸಭೆ ನಡೆಸಲಿದೆ.
ಪಾದಯಾತ್ರೆ ಹಿನ್ನೆಲೆಯಲ್ಲಿ ವಸತಿ, ಊಟೋಪಚಾರ, ಪ್ರಚಾರ ಹಾಗೂ ಸಾರ್ವಜನಿಕ ಸಭೆಗಳ ಆಯೋಜನೆಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.
 
ಆ ಸಮಿತಿಗಳ ಪದಾಧಿಕಾರಿಗಳು ಹಾಗೂ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪಾದಯಾತ್ರೆಯಿಂದ ಉಂಟಾಗಬಹುದಾದ ರಾಜಕೀಯ ಪರಿಣಾಮಗಳ ಕುರಿತು ಬಿಜೆಪಿ ಮತ್ತು ಜೆಡಿಎಸ್‍ನಲ್ಲಿ ಈಗಾಗಲೇ ದುಗುಡ ಆರಂಭವಾಗಿದ್ದು, ಟೀಕೆ, ಟಿಪ್ಪಣಿಗಳು ವ್ಯಾಪಕವಾಗಿ ಕೇಳಿ ಬಂದಿವೆ.
 
ಕೊರೊನಾ ಹೆಚ್ಚಳವನ್ನೇ ನೆಪ ಮಾಡಿಕೊಂಡು ಲಾಕ್‍ಡೌನ್ ಸೇರಿದಂತೆ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರ ಪಾದಯಾತ್ರೆಗೆ ಅಡ್ಡಿ ಪಡಿಸುವ ಆತಂಕವೂ ಕಾಂಗ್ರೆಸ್ ಪಾಳೆಯವನ್ನು ಕಾಡುತ್ತಿದೆ. ಪಾದಯಾತ್ರೆ ದಿನಾಂಕ ಘೋಷಿಸಿದ ಕ್ಷಣದಿಂದ ಪಕ್ಷದ ಒಳವಲಯದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಈವರೆಗೂ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಅರ್ಧದಷ್ಟು ಜನ ಭಾಗವಹಿಸಿದ್ದರೂ ಎರಡು ಸಾವಿರಕ್ಕೂ ಹೆಚ್ಚು ಮಂದಿ ನಿತ್ಯದ ಕಾಲ್ನಡಿಗೆ ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ