ಕಾಂಗ್ರೆಸ್‌ ಪಕ್ಷ ಜನರನ್ನ ಬೆದರಿಸಿ ಮರ್ಯಾದೆ ಕಳೆಯುತ್ತಿದೆ- ಬಿ.ವೈ. ವಿಜಯೇಂದ್ರ

geetha

ಬುಧವಾರ, 31 ಜನವರಿ 2024 (19:48 IST)
ಬೆಂಗಳೂರು :ಮೋದಿಯವರ ಅಭಿವೃದ್ಧಿ ಕಾರ್ಯ, ಶ್ರೀರಾಮನ  ಜೈಕಾರ, ಕೇಸರಿಯ ವಿಸ್ತಾರ ಕಾಂಗ್ರೆಸ್ಸಿಗರನ್ನು ಕಂಗೆಡಿಸಿದೆ, ಅಖಾಡಕ್ಕೆ ಬರುವ ಮುನ್ನವೇ  ಸೋಲೊಪ್ಪಿಕೊಳ್ಳುವಂತೆ ಮಾಡಿದೆ". ಓಟಿಗಾಗಿ ನೋಟು ಎನ್ನುತ್ತಿದ್ದ ಕಾಂಗ್ರೆಸ್ಸಿಗರು ಕಳೆದ ಚುನಾವಣೆಯಲ್ಲಿ ಓಟಿಗಾಗಿ ಬಿಟ್ಟಿ ಗ್ಯಾರಂಟಿ ಎಂದರು, ಇದೀಗ ಓಟು ಕೊಡದಿದ್ದರೆ ಗ್ಯಾರಂಟಿ ನಿಲ್ಲಿಸುವ ಏಟು ಕೊಡುವುದಾಗಿ ಮತದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ, ಏಟಿಗೆ ಎದಿರೇಟು ಕೊಡುವ ತಾಕತ್ತು ನಮ್ಮ ಮತದಾರರಿಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. 
 
 ಪ್ರಬುದ್ಧತೆಗೆ ಹೆಸರಾದ ನಮ್ಮ ಕರ್ನಾಟಕದ ಮತದಾರರನ್ನುಆಮಿಷಗಳಿಗೆ ಬಲಿಯಾಗುವ ದುರ್ಬಲ ಮನಸ್ಸಿನವರು ಎಂದು ಭಾವಿಸಿರುವ ಕಾಂಗ್ರೆಸ್ ತಮ್ಮ ಶಾಸಕರೊಬ್ಬರ ಮೂಲಕ ಮತದಾರರನ್ನು ಬಿಕ್ಷುಕರಂತೆ ಬೆದರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಿಸುವ ಹೇಳಿಕೆ ಕೊಡಿಸಿರುವುದು ಅಕ್ಷಮ್ಯ ಅಪರಾಧ. ಈ ಕೂಡಲೇ ಕಾಂಗ್ರೆಸ್ ಜನರ ಬಳಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತರೆ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸಬಹುದು ಎಂದು ಮಾಗಡಿಯ ಕಾಂಗ್ರೆಸ ಶಾಸಕ ಎಚ್‌.ಸಿ ಬಾಲಕೃಷ್ಣ ನೀಡಿರುವ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಮೈಕ್ರೋಬ್ಲಾಗಿಂಗ್‌ ವೇದಿಕೆ ಎಕ್ಸ್‌ ಮೂಲಕ ಪ್ರತಿಕ್ರಿಯಿಸಿರುವ ವಿಜಯೇಂದ್ರ ಅವರು, ಕಾಂಗ್ರೆಸ್‌ ಪಕ್ಷವು ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗದೇ ಪರದಾಡುತ್ತಿದೆ. ಈ  ನಡುವೆ ಫಲಾನುಭವಿ ಜನರನ್ನು ಹಂಗಿಸಿ ಬೆದರಿಸಿ ಕರ್ನಾಟಕದ ಮಾನ ಕಳೆಯುತ್ತಿದೆ ಎಂದು ಟೀಕಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ