ಬೆಂಗಳೂರು: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದಿಢೀರ್ ಅಡುಗೆ ಅನಿಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಈ ಇಬ್ಬರು ನಾಯಕರು ದೀರ್ಘ ಮಾತುಕತೆಯಲ್ಲಿ ತೊಡಗಿದ್ದು ಗಮನ ಸೆಳೆಯಿತು.
ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸೇರಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರು, ಸಂಸದರು ಹಾಗೂ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಭಾಗಿಯಾಗಿ, ಬಿಜೆಪಿಗೆ ತಿರುಗೇಟು ನೀಡಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಮನಮೋಹನ್ ಸಿಂಗ್ ಇದ್ದಾಗ ಅಗತ್ಯ ವಸ್ತುಗಳ ಬೆಲೆ ಎಷ್ಟಿತ್ತು ಈಗ ಎಷ್ಟಾಗಿದೆ ಎನ್ನುವುದನ್ನು ಅರಿಯಬೇಕು. ಅಚ್ಛೇದಿನ್ ಬರಲಿದೆ, ನಾವು ಅಧಿಕಾರಕ್ಕೆ ಬಂದ ಕೇವಲ ೧೦೦ ದಿನಗಳಲ್ಲಿ ಕಪ್ಪು ಹಣ ವಾಪಸ್ ತಂದು ೧೫ ಲಕ್ಷ ರೂ. ಪ್ರತಿ ಖಾತೆಗೆ ಹಾಕುತ್ತೇವೆ ಎಂದವರು, ೩ನೇ ಅವಧಿಗೆ ಅಧಿಕಾರಕ್ಕೆ ಬಂದರೂ ಅದರ ಬಗ್ಗೆ ಚಕಾರವಿಲ್ಲ.
ಮನಬಂದಂತೆ ಇಂಧನ ಬೆಲೆ ಹೆಚ್ಚಿಸುವುದರಿಂದ ಸಾರಿಗೆ, ಸರಕು ಸಾಗಣೆ, ವ್ಯಾಪಾರ ವಹಿವಾಟು, ಕೃಷಿ, ಕೈಗಾರಿಕೆ ಸೇರಿ ಇನ್ನಿತರೆ ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಜನಸಾಮಾನ್ಯರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ ಎಂದು ಸಚಿವರು ದೂರಿದರು.