ಸಂಚಾರಿ ಪೊಲೀಸ್ ಠಾಣೆ ಕಾನ್ಸಟೇಬಲ್ ಸೇರಿ ಹದಿನಾರು ಜನರಿಗೆ ಕೊರೊನಾ ಪತ್ತೆಯಾಗಿದೆ.
ರಾಯಚೂರಿನ ದೇವದುರ್ಗದ ಕಸ್ತೂರ್ ಬಾ ಕ್ವಾರಂಟೈನ್ ಸೆಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸಟೇಬಲ್ ಒಬ್ಬರಿಗೆ ಕೊರೊನಾ ದೃಢಪಟ್ಟಿದ್ದು ಪೊಲೀಸರಿಗೆ ಆತಂಕ ಉಂಟು ಮಾಡಿದೆ.
ಅವಿವಾಹಿತನಾದ ಕಾನ್ಸಟೇಬಲ್ ತನ್ನ ಸ್ನೇಹಿತರೊಂದಿಗೆ ವಾಸವಿದ್ದು, ಈಗ ಆತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ನಡೆದಿದೆ. ದೇವದುರ್ಗ ಸಂಚಾರಿ ಪೊಲೀಸ್ ಠಾಣೆ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಕಾನ್ಸಟೇಬಲ್ ನನ್ನು ರಾಯಚೂರಿನ ನಿಯೋಜಿತ ಕೊರೊನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ 16 ಕೊರೊನಾ ಪ್ರಕರಣಗಳು ಪತ್ತೆ ಸೇರಿದಂತೆ ಒಟ್ಟು 233 ಪ್ರಕರಣಗಳು ಪತ್ತೆಯಾದಂತಾಗಿದೆ. ಇದರಲ್ಲಿ ಅತಿ ಹೆಚ್ಚು 187 ಸೋಂಕಿತರು ದೇವದುರ್ಗ ತಾಲೂಕಿನವರಾಗಿದ್ದು, ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದಿದ್ದು, ದೇವದುರ್ಗದ ವಿವಿಧ ಕ್ವಾರಂಟೈನ್‌ಗಳಲ್ಲಿ ಇದ್ದರು.