ಶಾಲಾ ಕಾಲೇಜುಗಳಲಿ ಕೋವಿಡ್ ಹೆಚ್ಚಳ
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಭಾನುವಾರ ಮತ್ತೆ ಮೂರು ಶಾಲೆಗಳಲ್ಲಿ 32 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಕಳೆದ ಕಳೆದ ಹದಿನೆಂಟು ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 603 ತಲುಪಿದೆ.ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 19, ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ 9 ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇರಹಳ್ಳಿಯ ನವೋದಯ ಶಾಲೆಯ ನಾಲ್ವರು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಕಳೆದ ವಾರವಷ್ಟೇ 11 ವಿದ್ಯಾರ್ಥಿಗಳು ಪಾಸಿಟಿವ್ ಆಗಿದ್ದರು. ಈ ಮೂಲಕ ಶಾಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 20ಕ್ಕೇರಿದೆ.ಕೊರೋನಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ ವಸತಿ ಶಾಲೆಗಳು ಹಾಗೂ ನರ್ಸಿಂಗ್ ಕಾಲೇಜುಗಳಲ್ಲೇ ಹೆಚ್ಚಾಗಿ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದು ಆತಂಕ ಮೂಡಿಸಿದೆ.