ಎಲ್ಲಾ ಜಿಲ್ಲೆಗಳಲ್ಲಿ ಕಡಿಮೆ ಅವಧಿ ಹಾಗೂ ಕಡಿಮೆ ವೆಚ್ಚದಲ್ಲಿ ಕೋವಿಡ್ 19 ಪರೀಕ್ಷೆ ನಡೆಸಲಾಗುತ್ತದೆ.
ಈ ಕುರಿತು ಸರ್ಕಾರ ಸೂಕ್ತ ಕ್ರಮವಹಿಸುತ್ತಿದ್ದು, ಎಲ್ಲಾ ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ಇದನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಕೊರೊನಾ ತಪಾಸಣೆ ಹಾಗೂ ಚಿಕಿತ್ಸೆಗೆ ಸುಧಾರಿತ ಕ್ರಮಗಳನ್ನು ಹಂತ ಹಂತವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ವರೆಗೆ ಕೊರೋನಾ ಸೋಂಕು ತಡೆ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ನೀಡಿದ್ದು ಮುಂದಿನ ಕೆಲವು ತಿಂಗಳೂ ಇದೇ ರೀತಿಯ ಸಹಕಾರ ನಿರೀಕ್ಷೆ ಮಾಡುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಲಾಕ್‍ಡೌನ್ ವೇಳೆ ಕಟ್ಟುನಿಟ್ಟಿನ ನಿಯಮ ಜಾರಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡ ಕಾರಣ ಕೋವಿಡ್-19 ನಿಯಂತ್ರಣದಲ್ಲಿದೆ. ಈ ವರೆಗೆ 576 ಮಂದಿ ಸೋಂಕಿತರಾಗಿದ್ದು, ಅದರಲ್ಲಿ 235 ಮಂದಿ ಗುಣಮುಖರಾಗಿದ್ದಾರೆ. 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.