ಅಕ್ಟೋಬರ್ ವರೆಗೂ ಕೊರೊನಾ ಕಂಟಕ: ಸಚಿವ ಸುಧಾಕರ್
ದೇಶದಲ್ಲಿ ಜೂನ್ ಮೂರನೇ ವಾರದಿಂದ ಅಕ್ಟೋಬರ್ ವರೆಗೂ ಕೊರೊನಾ ಸೋಂಕು ಹೆಚ್ಚಳವಾಗಬಹುದು ಎಂದು ಕಾನ್ಪುರ ಐಐಟಿ ವರದಿ ನೀಡಿದೆ ಎಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿ ಪ್ರಕಾರ ಜೂನ್ ಮೂರನೇ ವಾರದಿಂದ ಅಕ್ಟೋಬರ್ ವರೆಗೂ ಕೊರೊನಾ ಸೋಂಕು ಪರಿಸ್ಥಿತಿಯನ್ನು ನಾವೂ ಸೂಕ್ಷ್ಮವಾಗಿ ನೋಡುತ್ತಿದ್ದೇವೆ. ಅದಕ್ಕೆ ತಕ್ಕಂತೆ ಪೂರಕವಾಗಿ ಸಿದ್ದತೆ ಮಾಡಿಕೊಂಡಿದ್ದೇವೆ. ಈಗ ಬರುತ್ತಿರುವ ಕೋವಿಡ್ ಪ್ರಭೇದ ಸೌಮ್ಯ ಲಕ್ಷಣ ಇರುವುದರಿಂದ ಜನ ಸಾಮಾನ್ಯರು ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ ಎಂದರು.
ಬೆಂಗಳೂರಿನ ಎರಡು ಶಾಲೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆ ಶಾಲಾ ಮಕ್ಕಳಿಗೆ ರಜೆ ಘೊಷಿಸಿಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಸ್ಪಷ್ಟವಾದ ನಿಯಮಾವಳಿ ರೂಪಿಸಿದ್ದೇವೆ. ವಿದ್ಯಾರ್ಥಿಗಳು ಬರುವಾಗ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ಚೆಕ್ ಮಾಡಲು ಸೂಚಿಸಿದ್ದೇವೆ. ಶಾಲೆಗಳಲ್ಲಿ ಎಲ್ಲಾ ನಿಯಮ ಪಾಲನೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಈಗಾಗಲೇ ಮೂರನೇ ಅಲೆ ಬಂದುಹೋಗಿದೆ. ಮೂರನೇ ಅಲೆಯಲ್ಲಿ ಸಾವು ನೋವು ಹೆಚ್ಚಾಗಿ ಕಂಡು ಬಂದಿಲ್ಲ . ಲಸಿಕೆಯ ಕಾರಣದಿಂದ ಕೋವಿಡ್ ಅಷ್ಟೊಂದು ಹರಡಲಿಲ್ಲ . ನಮ್ಮ ಸರ್ಕಾರ ಗರಿಷ್ಠ ಲಸಿಕೆ ನೀಡಿದೆ. ನಮ್ಮ ರಾಜ್ಯ ದಲ್ಲಿ ಎರಡು ಡೋಸ್ 10 ಕೋಟಿಗೂ ಹೆಚ್ಚು ಲಸಿಕೆ ನೀಡಿದ್ದೇವೆ. ವ್ಯಾಕ್ಸಿನ್ ತೆಗೆದುಕೊಂಡರೆ ಕೋವಿಡ್ ಬರುವುದಿಲ್ಲ ಎಂದಲ್ಲ , ಆದರೆ ಸಾವು ನೋವಿನ ಪ್ರಮಾಣ ಕಡಿಮೆಯಾಗುತ್ತದೆ. ಮೂರನೇ ಡೋಸ್ ತೆಗೆದುಕೊಂಡವರ ಪ್ರಮಾಣ ಕಡಿಮೆಯಿದೆ. ಮುಂದಿನ ಅಲೆ ಬರುವ ತನಕ ಕಾಯುವುದು ಬೇಡ ಲಸಿಕೆ ಲಭ್ಯವಿದ್ದಾಗ ತೆಗೆದುಕೊಳ್ಳಿ ಎಂದರು.