ನಿಗಮ, ಮಂಡಳಿ ಪಟಾಕಿ ಠುಸ್.. ಅತೃಪ್ತರ ಬೇಗುದಿಯಲ್ಲಿ ಸಿದ್ದರಾಮಯ್ಯ

ಶನಿವಾರ, 29 ಅಕ್ಟೋಬರ್ 2016 (11:35 IST)

ಬೆಂಗಳೂರು: ಇನ್ನೇನು ತುತ್ತು ಕೈಗೆ ಬಂದು ಬಾಯಿಗೆ ಬಿದ್ದೇ ಬಿಟ್ಟಿತು ಎನ್ನುವಷ್ಟರಲ್ಲಿ, ಕೈಗೂ ಸಿಗದೆ, ಬಾಯಿಗೂ ಬರದೆ ಮತ್ತೆ ಎದುರು ನೋಡುವಂತಾಗಿದೆ.
 


 

ಇದು ಕಾಂಗ್ರೆಸ್ ಕಾರ್ಯಕರ್ತರ ಸದ್ಯದ ಪರಿಸ್ಥಿತಿ. ಹೌದು, ನಿಗಮ, ಮಂಡಳಿ ಅಧ್ಯಕ್ಷ ಉಪಾಧ್ಯಕ್ಷರ ಸಂಭವನೀಯ ಪಟ್ಟಿಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈ ಕಮಾಂಡ್ ನಿಂದ ಒಪ್ಪಿಗೆ ಪಡೆದುಕೊಂಡು ಬಂದಿದ್ದರು. ನಾಲ್ಕು ದಿನದ ಹಿಂದೆಯೇ ನೇಮಕಾತಿ ಆದೇಶದ ಪ್ರತಿ ಸಂಬಂಧಿಸಿದ ಅಭ್ಯರ್ಥಿಗಳಿಗೆ ಖುದ್ದಾಗಿ ತಲುಪಬೇಕಿತ್ತು. ಆದರೆ, ಎದುರಾದ ಜಿ. ಪರಮೇಶ್ವರ ಅವರ ಸುರಾಜ್ಯ ಸಮಾವೇಶದಿಂದ ಅದನ್ನು ಎರಡು ದಿನ ಮುಂದೂಡಲಾಗಿತ್ತು. ಸಮಾವೇಶದ ನಂತರ ನೇಮಕಾತಿ ಆದೇಶ ಪತ್ರ ಕೈಗೆ ಸಿಗುತ್ತದೆ ಎಂದು ಕೆಲವು ಅಭ್ಯರ್ಥಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆಯ ಪಟಾಕಿಗಳೆಲ್ಲ ದೀಪಾವಳಿ ಹಬ್ಬದಂದು ಠುಸ್ ಆಗಿ ಬಿಟ್ಟಿವೆ.

 

ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ವಿಫಲರಾದ ಕೆಲವು ಹಿರಿಯ ಶಾಸಕರು ನಿಗಮ, ಮಂಡಳಿ ಸ್ಥಾನದ ಕುರಿತು ಅಲ್ಲಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹದಿನೈದು, ಇಪ್ಪತ್ತು ವರ್ಷಗಳ ಕಾಲ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ, ಮೂರು, ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾದರೂ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ಇನ್ನೂ ದೊರಕಿಲ್ಲ. ಪಕ್ಷದ ಬಲವರ್ಧನೆಗಷ್ಟೇ ನಮ್ಮನ್ನು ಬಳಸಿಕೊಂಡು, ಅಧಿಕಾರವನ್ನೆಲ್ಲ ತಮ್ಮ ಆಪ್ತೇಷ್ಟರಿಗೆ ನೀಡುತ್ತ ಬಂದಿದ್ದಾರೆ. ಯಾವುದೇ ಪ್ರಯೋಜನವಿಲ್ಲದ ನಿಗಮ ಮಂಡಳಿ ಸ್ಥಾನ ನೀಡಿ, ಸಮಾಧಾನ ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕೆಲವು ಹಿರಿಯ ಶಾಸಕರು ತಮ್ಮ ಆಪ ಆಪ್ತ ವಲಯದಲ್ಲಿ ಆಡಿಕೊಳ್ಳುತ್ತಿರುವ ಮಾತು ಗುಟ್ಟಾಗೇನೂ ಉಳಿದಿಲ್ಲ.

 

ಈ ಅಸಮಧಾನದ ಮಾತು ಹಾಗೂ ಅತೃಪ್ತಿಯ ಹೊಗೆ ದೀಪಾವಳಿ ಸಿಡಿಮದ್ದಿನ ಹೊಗೆಗಿಂದ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಣಿಸಿಕೊಂಡಿದೆ. ನಿಗಮ, ಮಂಡಳಿ ಹುದ್ದೆಗಳು ಏನಿದ್ದರೂ ವರ್ಷದ ಮೇಲೆ ಎರಡೋ, ಮೂರೋ ತಿಂಗಳು ಮಾತ್ರ. ಅದು ಕೂಡಾ ಎದೆಯುಬ್ಬಿಸಿಕೊಂಡು ಓಡಾಡುವ ಹುದ್ದೆಯಲ್ಲ. ಹಾಗೆ ಹೇಳಿಕೊಳ್ಳುವಷ್ಟು ಲಾಭದಾಯಕವೂ ಇಲ್ಲ ಎನ್ನುವುದು ಬಹುತೇಕರ ಲೆಕ್ಕಾಚಾರ. ಆದರೂ ಒಂದು ವರ್ಷವಾದರೂ ಸರಕಾರದ ಗೂಟದ ಕಾರಿನಲ್ಲಿ ಓಡಾಡಬಹುದಲ್ಲ ಎನ್ನುವ ಸಣ್ಣ ಆಸೆ ಕೆಲವು ಅಭ್ಯರ್ಥಿಗಳದ್ದು. ಆದರೆ, ಒಂದು ವೇಳೆ ಸೀಟು ಹಂಚಿಕೆಯಾದರೆ ಈಗಿದ್ದ ಶೀತಲ ಸಮರ ಬಹಿರಂಗವಾದರೆ ಮುಂದೇನು ಎನ್ನುವ ಚಿಂತೆ ಮುಖ್ಯಮಂತ್ರಿಯವರನ್ನು ಕಾಡುತ್ತಿದೆ.

 

ಬಿಜೆಪಿ, ಜೆಡಿಎಸ್ ಈಗಾಗಲೇ ಚುನಾವಣಾ ಅಖಾಡಕ್ಕಿಳಿದು ಕಾಂಗ್ರೆಸ್ ವಿರುದ್ಧ ಒಂದರ ಮೇಲೊಂದರಂತೆ ಬಾಣ ಪ್ರಯೋಗ ಮಾಡುತ್ತಲೇ ಇದೆ. ಬಾಹ್ಯ ವಿರೋಧಿಗಳು ಬಿಟ್ಟ ಬಾಣವನ್ನು ತಪ್ಪಿಸಿಕೊಳ್ಳುವುದರಲ್ಲೇ ಸಿದ್ದರಾಮಯ್ಯ  ಹೈರಾಣಾಗುತ್ತಿದ್ದಾರೆ. ಹೀಗಿದ್ದಾಗ, ಒಳಗಿರುವ ಅತೃಪ್ತರನ್ನು ಸಮಾಧಾನ ಪಡಿಸುವುದು ಅವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯದ ಮಾತು‌. ಯಾಕೆಂದರೆ ಪಕ್ಷದ ಒಳಗೂ ಸಿದ್ದರಾಮಯ್ಯನವರ ಕಾಲನ್ನು ಎಳೆಯುವವರ ಸಂಖ್ಯೆ ಸಾಕಷ್ಟಿದೆ. ಅದಕ್ಕೆ ದಲಿತ ಮುಖ್ಯಮಂತ್ರಿ ಎನ್ನುವ ಕೂಗು ನಾಡಿನಾದ್ಯಂತ ಪ್ರತಿ ಧ್ವನಿಸುವಂತೆ ಮಾಡಿದ್ದು ಸ್ಪಷ್ಟ ನಿದರ್ಶನ.

ಏನೇ ಇರಲಿ, ನಿಗಮ ಮಂಡಳಿಯಲ್ಲಿ ಇರುವುದು 90 ಸ್ಥಾನಗಳು ಮಾತ್ರ. ಆಕಾಂಕ್ಷಿಗಳು ಎರಡುನೂರಕ್ಕೂ ಜಾಸ್ತಿ. 90 ರಲ್ಲಿ ಆಯ್ಕೆಯಾದವರಿಗೂ ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಬೇಸರ. ಇವೆಲ್ಲದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾವಳಿ ಬಳಿಕ ನಿಗಮ, ಮಂಡಳಿ ಸ್ಥಾನಕ್ಜೆ ನೇಮಕಾತಿ ಆದೇಶ ನೀಡಲು ತೀರ್ಮಾನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ