ಮಹಾನಗರ ಪಾಲಿಕೆಯಲ್ಲಿನ ಭ್ರಷ್ಟಾಚಾರ ಮತ್ತೊಮ್ಮೆ ಬಯಲಿಗೆ ಬಿದ್ದಿದ್ದು, ಕಮಿಷನರ್ ಪಿಎ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಖಾಸಗಿ ಶಾಲೆಯೊಂದಕ್ಕೆ ಫಾರಂ2 ನೀಡಲು 50 ಸಾವಿರ ರೂ. ಲಂಚ ಪಡೆದ ಬಳ್ಳಾರಿ ನಗರದ ಮಹಾನಗರ ಪಾಲಿಕೆ ಆಯುಕ್ತರ ಆಪ್ತ ಸಹಾಯಕ ಮತ್ತು ಅಟೆಂಡರ್ ಭ್ರಷ್ಟಾಚಾರ ನಿಗ್ರಹ ದಳ ಬೀಸಿದ ಬಲೆಗೆ ಬಿದ್ದಿದ್ದಾರೆ.
ಖಾಸಗಿ ಶಾಲೆ ಆಡಳಿತ ಮಂಡಳಿ ಅವರ ಪರವಾಗಿ ಚಂದ್ರಶೇಖರ್ ಎಂಬವರು ಕಳೆದ ಜುಲೈನಲ್ಲಿ ಫಾರಂ 2 ನೀಡಲು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಇದುವರೆಗೆ ನೀಡದೇ 60 ಸಾವಿರ ರೂ. ಹಣ ನೀಡುವಂತೆ ಪಾಲಿಕೆಯ ಆಯುಕ್ತರ ಪಿಎ ಮಲ್ಲಿಕಾರ್ಜುನ ಪಾಟೀಲ್ ಲಂಚ ಕೇಳಿದ್ದರಂತೆ.
ಈ ಬಗ್ಗೆ ಚಂದ್ರಶೇಖರ್ ಎಸಿಬಿಗೆ ದೂರು ನೀಡಿದ್ದರು. ಅಂತಿಮವಾಗಿ 50 ಸಾವಿರ ರೂ. ಲಂಚ ನೀಡುವ ಬಗ್ಗೆ ಮಾತುಕತೆ ನಡೆಸಿ ಹಣ ಪಡೆಯುವಾಗ ಮಲ್ಲಿಕಾರ್ಜುನ್ ಪಾಟೀಲ್ ಮತ್ತು ಅಟೆಂಡರ್ ಭಾಷಾ ಇಬ್ಬರು ಎಸಿಬಿ ಅಧಿಕಾರಿಗಳಿಗೆ ಹಣ ಸಮೇತ ಸಿಕ್ಕಿಬಿದ್ದಿದ್ದಾರೆ.
ಫಾರಂ 2 ಅನ್ನು ಪಾಲಿಕೆ ಆಯುಕ್ತರೇ ನೀಡಬೇಕು. ಅವರ ಸಹಿ ಬೇಕೆಬೇಕು.ಅದಕ್ಕಾಗಿ ಅವರಿಗೆ ಹಣ ನೀಡಲೇಬೇಕು ಎಂದು ಪಾಟೀಲ್ ದೂರುದಾರರಿಗೆ ಹೇಳಿದ್ದಾರಂತೆ.
ಈಗ ಎಸಿಬಿ ಅಧಿಕಾರಿಗಳು ಪಾಟೀಲ್ ಮತ್ತು ಭಾಷಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದು ಮುಂದಿನ ವಿಚಾರಣೆ ನಡೆಸಿದ್ದಾರೆ.