ಬೆಂಗಳೂರು : ಸಚಿವ ರಾಜಣ್ಣ ಅವರ ಸಿಎಂ ಹೇಳಿಕೆ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಪರಮೇಶ್ವರ್ ಸಿಎಂ ಆಗಬೇಕು ಎಂಬ ರಾಜಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕ ಸಭೆಯಲ್ಲಿ ರಾಜಣ್ಣ ಒಳ್ಳೆ ಮಾತನಾಡಿದ್ದಾರೆ. ಅದನ್ನು ವಿಶ್ಲೇಷಣೆ ಮಾಡುವುದು ಏನಿದೆ? ನಾನು ಸಿಎಂ ಆಗಬೇಕು ಎಂಬುದರ ಸಾಧ್ಯಾಸಾಧ್ಯತೆ ನಿಮಗೇ ಗೊತ್ತಿದೆ ಎಂದರು.
ಬಿಕೆ ಹರಿಪ್ರಸಾದ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವೆಲ್ಲ ವೈಯಕ್ತಿಕವಾಗಿ ಅನೇಕ ವಿಚಾರ ಪ್ರಸ್ತಾಪ ಮಾಡ್ತೀವಿ. ಅದು ಸರ್ಕಾರ ಹಾಗೂ ಪಕ್ಷದ ಮಾತಾಗುವುದಿಲ್ಲ. ಪಕ್ಷದ ಸಭೆಯಲ್ಲಿ ಚರ್ಚೆಯಾಗಿ ತೀರ್ಮಾನಗಳಾದರೆ ಸಮರ್ಥನೆ ಮಾಡಿಕೊಳ್ಳಬಹುದು. ವೈಯಕ್ತಿಕ ಹೇಳಿಕೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಇನ್ನಷ್ಟು ಡಿಸಿಎಂ ಹುದ್ದೆಗಳು ಸೃಷ್ಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ನವರು ಏನು ಸರಿ ಅನಿಸುತ್ತದೆ ಹಾಗೆ ಮಾಡ್ತಾರೆ. ಒಬ್ಬರು ಡಿಸಿಎಂ ಇರಬೇಕು ಎಂದು ಹೈಕಮಾಂಡ್ನವರೇ ತೀರ್ಮಾನ ಮಾಡಿದ್ದಾರೆ. ಜಾಸ್ತಿ ಮಾಡಬೇಕು ಎಂದರೆ ಅವರೇ ತೀರ್ಮಾನ ಮಾಡಬೇಕು. ನಾನೇನು ಅಂದು ಮನವಿ ಮಾಡಿಲ್ಲ ಈಗಲೂ ಮಾಡಿಲ್ಲ. ಏನೇ ನಿರ್ಧಾರ ಮಾಡುವುದಕ್ಕೆ ಮುಂಚೆ ಹಿರಿಯರ ಜೊತೆಗೆ ಚರ್ಚೆ ಮಾಡ್ತಾರೆ ಎಂದರು.