ರಾಹುಲ್ ಗಾಂಧಿಗೆ ಹಿಂದೂ ವಿರೋಧಿಗಳು ಟ್ಯೂಷನ್ ನೀಡುತ್ತಿದ್ದಾರೆ: ಸಿಟಿ ರವಿ

Krishnaveni K

ಮಂಗಳವಾರ, 2 ಜುಲೈ 2024 (10:09 IST)
ಬೆಂಗಳೂರು: ರಾಹುಲ್ ಗಾಂಧಿಯವರು ತಮ್ಮ ಹೇಳಿಕೆಗೆ ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಗ್ರಹಿಸಿದರು.
 
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು ಸಮಸ್ತ ಹಿಂದೂ ಎನ್ನುವವರ ಬಗ್ಗೆ ದ್ವೇಷ ಭಾವನೆ ಬಿತ್ತುವವರು ಎಂದು ಆರೋಪ ಮಾಡಿದ್ದಾರೆ. ಹಿಂದೂ ಎಂಬುದು ಜೀವನಶೈಲಿ, ಹಿಂದೂ ಎಂದರೆ ಸರ್ವೇ ಜನಾಃ ಸುಖಿನೋ ಭವಂತು ಎಂಬ ವಿಚಾರವನ್ನು ಪ್ರತಿಪಾದಿಸುತ್ತದೆ. ಹಿಂದೂ ಎನ್ನುವುದು ವಿಶ್ವವೇ ಒಂದು ಕುಟುಂಬ ಎಂದು ಭಾವಿಸುವುದು, ಹಿಂದೂ ಎಂಬುದು ಅಣುರೇಣು ತೃಣಕಾಷ್ಟದಲ್ಲೂ ಭಗವಂತನನ್ನು ಕಾಣಬೇಕೆನ್ನುವ ವಿಶಾಲ ಭಾವನೆ ಹೊಂದಿದೆ ಎಂದು ವಿಶ್ಲೇಷಿಸಿದರು.

ಹಿಂದೂ ಎಂಬುದು ಬರಿಯ ಮನುಷ್ಯ ಮಾತ್ರವಲ್ಲ; ಪ್ರಾಣಿ, ಪಕ್ಷಿ, ಗಿಡ ಮರ ಎಲ್ಲವೂ ಚೆನ್ನಾಗಿರಬೇಕೆಂದು ಪ್ರಾರ್ಥಿಸುವ ವಿಚಾರಕ್ಕೆ, ದ್ವೇಷಭಾವ ಬಿತ್ತುವುದು ಎನ್ನುವ ಕಲ್ಪಿತ ಆರೋಪವನ್ನು ರಾಹುಲ್ ಗಾಂಧಿಯವರು ಮಾಡಿದ್ದಾರೆ. ಅನ್ನ ಬೆಂದಿದೆಯೋ ಇಲ್ಲವೋ ಎಂದು ತಿಳಿಯಲು ಎಲ್ಲ ಅಕ್ಕಿ ಮುಟ್ಟಿ ನೋಡಬೇಕಿಲ್ಲ. ಇವರು ತಮ್ಮ ಚೊಚ್ಚಲ ಭಾಷಣದಲ್ಲೇ ತಾನು ಆ ಸ್ಥಾನಕ್ಕೆ ಯೋಗ್ಯ ಅಲ್ಲ ಮತ್ತು ನನಗೆ ಭಾರತ ಮತ್ತು ಭಾರತೀಯತೆ, ಹಿಂದೂ, ಹಿಂದುತ್ವದ ಬಗ್ಗೆ ಏನೂ ಗೊತ್ತಿಲ್ಲ ಎನ್ನುವಂತಿದೆ. ಇವರಿಗೆ ಗೊತ್ತಿಲ್ಲದೆ ಇದ್ದರೂ ಇವರ ಟ್ಯೂಟರ್‍ಗಳು, ದ್ವೇಷ ಭಾವನೆ ಹುಟ್ಟಿಸುವ ಕೆಲಸವನ್ನು ಮಾಡಿಸಿದಂತೆ ಕಾಣುತ್ತದೆ ಎಂದು ತಿಳಿಸಿದರು.

ಸಹಸ್ರಾರು ವರ್ಷಗಳ ಸನಾತನ ಪರಂಪರೆಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಆ ಮೂಲಕ ತನ್ನ ಅಯೋಗ್ಯತನವನ್ನು ಪ್ರದರ್ಶಿಸಿದ್ದಾರೆ. ತಕ್ಷಣ ಅವರು ಕ್ಷಮೆ ಯಾಚಿಸಬೇಕು; ಕ್ಷಮೆ ಯಾಚನೆ ಮಾಡುವ ಮೂಲಕ ತನ್ನ ತಪ್ಪು ಸರಿಪಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಯಾವ ವಿಚಾರವನ್ನು ಗಾಂಧಿ ಪ್ರತಿಪಾದಿಸಿದರೋ, ಯಾವ ವಿಷಯವನ್ನು ವಿವೇಕಾನಂದರು ಪ್ರತಿಪಾದಿಸಿದ್ದಾರೋ, ಯಾವ ವಿಚಾರವನ್ನು ಸನಾತನ ಧರ್ಮದ ಋಷಿ ಮುನಿಗಳು ಪ್ರತಿಪಾದನೆ ಮಾಡಿದರೋ ಆ ವಿಚಾರಕ್ಕೆ ವ್ಯತಿರಿಕ್ತವಾಗಿ ಇವರು ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ ಮತ್ತು ಜಗತ್ತಿನಲ್ಲಿ ನಡೆಯುವ ಭಯೋತ್ಪಾದನೆಗೆ ಕಾರಣ ಯಾರೆಂದು ರಾಹುಲ್ ಗಾಂಧಿಯವರು ಉತ್ತರಿಸಬೇಕು ಎಂದು ಆಗ್ರಹಿಸಿದರು. ಭಯೋತ್ಪಾದನೆಗೆ ಹಿಂದುತ್ವ, ಹಿಂದೂಗಳು ಕಾರಣವೇ ಎಂದು
ಅವರು ಪ್ರಶ್ನಿಸಿದರು.

ನಿಮ್ಮ ಮಾತು ನಿಮ್ಮ ಯೋಗ್ಯತೆಯನ್ನು ತಿಳಿಸುತ್ತದೆ. ಆ ಭಯೋತ್ಪಾದಕರ ಬಗ್ಗೆ ಮಾತನಾಡುವ ಧೈರ್ಯ ನಿಮಗಿಲ್ಲ. ಯಾರು ಭಯೋತ್ಪಾದನೆ ಮಾಡುತ್ತಿದ್ದಾರೆ? ಯಾರ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದೆ? ಕಾಶ್ಮೀರದಲ್ಲಿ ಹಿಂದೂಗಳು ನಿರಾಶ್ರಿತರಾಗಲು ಕಾರಣ ಯಾರು? ವಿರೋಧ ಪಕ್ಷದ ನಾಯಕನಾಗಿ ತಾವು ಆ ಸ್ಥಾನಕ್ಕೆ ಯೋಗ್ಯನಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
 
ಅಯೋಗ್ಯತನದ ಪ್ರದರ್ಶನ..
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ ಅವರು, ಯಾರೋ ಟ್ಯೂಷನ್ ಕೊಟ್ಟಿದ್ದನ್ನು ಸದನದಲ್ಲಿ ಹೇಳಿದ್ದಾರೆ. ಆ ಟ್ಯೂಷನ್ ಕೊಡುವವರು ಒಂದೋ ಭಾರತ ವಿರೋಧಿಗಳಿರಬೇಕು; ಇಲ್ಲವೇ ಹಿಂದೂ ವಿರೋಧಿಗಳಿರಬೇಕು. ಆ ಮೂಲಕವೇ ತನ್ನ ಅಯೋಗ್ಯತನವನ್ನು ಇವರು ಪ್ರದರ್ಶನ ಮಾಡಿದ್ದಾರೆ ಎಂದು ಟೀಕಿಸಿದರು.
 
ಕಾಂಗ್ರೆಸ್ಸಿಗೆ 2 ಅವಧಿಗೆ ಅಧಿಕೃತ ವಿಪಕ್ಷ ನಾಯಕನ ಸ್ಥಾನಮಾನಕ್ಕೆ ಯೋಗ್ಯ ಸ್ಥಾನಗಳನ್ನು ಜನರು ಕೊಟ್ಟಿರಲಿಲ್ಲ. 3ನೇ ಬಾರಿಗೆ ಅವಕಾಶ ಸಿಕ್ಕಿದಾಗ ಒಬ್ಬ ಅಯೋಗ್ಯನನ್ನು ಕೂರಿಸಿ ತಾವು ವಿಪಕ್ಷವಾಗಲೂ ಲಾಯಕಿಲ್ಲ ಎಂಬುದನ್ನು ಕಾಂಗ್ರೆಸ್ ತೋರಿಸಿದೆ. ಈ ಹೇಳಿಕೆಯನ್ನು ನಿಮ್ಮ ಕಾಂಗ್ರೆಸ್ ಪಕ್ಷ ಒಪ್ಪುತ್ತದೆಯೇ ಎಂದು ಎಐಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಬೇಕು ಎಂದೂ ಒತ್ತಾಯಿಸಿದರು.
ಇವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುವುದೇ? ನೀವು ಗುಲಾಮಗಿರಿಯನ್ನು ಒಪ್ಪದೇ ಇದ್ದರೆ ಈ ಹೇಳಿಕೆಯನ್ನು ವಿರೋಧಿಸುತ್ತೀರಿ. ನಿಮ್ಮದು ಗುಲಾಮಿ ಮಾನಸಿಕತೆಯಾಗಿದ್ದರೆ ಅವರೇನು ಹೇಳಿದ್ದರೂ ಸರಿ ಎಂದು ಜೀ ಹುಜೂರ್ ಹೇಳುತ್ತೀರಿ ಎಂದು ತಿಳಿಸಿದರು.
 
ಮೂಡಾದಲ್ಲೂ ದೊಡ್ಡ ಹಗರಣ..
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಲೂಟಿಯಾಗಿದೆ. ನೂರಕ್ಕೆ ನೂರು ಲೂಟಿಯಾದ ಪ್ರಕರಣವಿದು. ನಾವು ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಮೂಡಾದಲ್ಲಿ ಸುಮಾರು 5 ಸಾವಿರ ಕೋಟಿ ರೂ.ಗಳ ಹಗರಣ ಆಗಿದೆ ಎಂದು ನಿನ್ನೆ ಮೈಸೂರಿಗೆ ಹೋದಾಗ ಹೇಳಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲೇ ನಡೆದ ಹಗರಣವಿದು. ಚಾಲ್ರ್ಸ್ ಶೋಭರಾಜ್ ಬದುಕಿದ್ದರೆ ನನ್ನನ್ನು ಮೀರಿಸುವವರು ಕಾಂಗ್ರೆಸ್ಸಿಗರು ಎಂದು ಸರ್ಟಿಫಿಕೇಟ್ ಕೊಡುತ್ತಿದ್ದ ಎಂದು ಸಿ.ಟಿ.ರವಿ ಅವರು ವ್ಯಂಗ್ಯವಾಡಿದರು.
 
ಗಂಗಾ ಕಲ್ಯಾಣ ಬೋರ್‍ವೆಲ್ ಕೊರೆಯಲು 3,500 ರೂ. ಲಂಚ, 50 ಲಕ್ಷ ರೂ. ಲೈಸನ್ಸ್ ರಿನೀವಲ್‍ಗೆ ಇಲಾಖೆ ಸಚಿವರಿಗೆ ದುಡ್ಡು ಕೊಡಬೇಕಂತೆ. ಇದು ಕಾಂಗ್ರೆಸ್ಸಿನ ಸ್ಯಾಂಪಲ್. ಎಲ್ಲರೂ ಲೂಟಿಗೆ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಒಂದು ಪ್ಲಾನ್‍ಗೆ ಅನುಮತಿ ಕೊಡಲು ಫೀಸ್ ಅಲ್ಲದೆ ಹೆಚ್ಚುವರಿಯಾಗಿ ಒಂದು ಅಡಿಗೆ 100 ರೂ. ಲಂಚ ಕೊಡಬೇಕಿದೆ. ಸೈಟ್ ನಿಮ್ಮದು, ನೀವು ಮನೆ ಕಟ್ಟುವವರು, ಸಾಲ ಪಡೆದವರೂ ನೀವೇ- ಇವರಿಗೆ ಅಡಿಗೆ 100 ರೂ. ಲಂಚ ಕೊಡಬೇಕು. ಇದು ಈ ಸರಕಾರದ ಪರಿಸ್ಥಿತಿ ಎಂದು ಟೀಕಿಸಿದರು.
 
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ