ಬೆಂಗಳೂರು: ಮಳೆಯ ಅಬ್ಬರ ಆರಂಭವಾದಾಗಿನಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ, ರೈಲು ಸಂಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶಿರಾಡಿ, ಚಾರ್ಮಾಡಿ ಘಾಟಿಯಲ್ಲಿ ಪ್ರತಿನಿತ್ಯ ಗುಡ್ಡ ಕುಸಿತವಾಗುತ್ತಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.
ಘಾಟಿ ರಸ್ತೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪದೇ ಪದೇ ಭೂ ಕುಸಿತವಾಗುತ್ತಿದೆ. ಈಗಿನ ಪರಿಸ್ಥಿತಿ ನೋಡಿದರೆ ಮತ್ತಷ್ಟು ಗುಡ್ಡ ಕುಸಿತ ಪ್ರಕರಣಗಳು ವರದಿಯಾಗುವುದಂತೂ ನಿಶ್ಚಿತ. ಶಿರಾಡಿ ಮತ್ತು ಚಾರ್ಮಾಡಿ ಎರಡೂ ಘಾಟಿ ರಸ್ತೆಗಳಲ್ಲಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದೇ ಸಂಚರಿಸಬೇಕಾದ ಪರಿಸ್ಥಿತಿಯಾಗಿದೆ. ಹೀಗಾಗಿ ಅನಿವಾರ್ಯವಾದರೆ ಮಾತ್ರ ಈ ರಸ್ತೆಯಲ್ಲಿ ಪ್ರಯಾಣಿಸುವುದು ಉತ್ತಮ.