ಮೈಸೂರು : 2021ರ ದಸರಾ ಮಹೋತ್ಸವಕ್ಕೆ ಸರ್ಕಾರ 6 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ 5,42,07,679 ರೂ. ವೆಚ್ಚವಾಗಿದ್ದರೆ 57 ಲಕ್ಷ ರೂ.ಗೂ ಹೆಚ್ಚು ಹಣ ಉಳಿತಾಯವಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಖರ್ಚುವೆಚ್ಚಗಳ ಮಾಹಿತಿಯನ್ನು ಬಿಡುಗಡೆ ಮಾಡಿದರು.
ಮೈಸೂರು ದಸರಾಗೆ 4,22,07,679 ರೂ., ಖರ್ಚಾಗಿದೆ. ಶ್ರೀರಂಗಪಟ್ಟಣ, ಚಾಮರಾಜನಗರ ದಸರಾ ಆಚರಣೆಗೆ ತಲಾ 50 ಲಕ್ಷ ರೂ., ಅರಕಲಗೂಡು ದಸರಾಗೆ 20 ಲಕ್ಷ ರೂ. ಬಿಡುಗಡೆ ಮಾಡಿದ್ದು ಒಟ್ಟು 5,42,07,679 ರೂ. ಹಣ ಖರ್ಚಾಗಿದೆ ಎಂದು ವಿವರಿಸಿದರು.
ಮೈಸೂರು ದಸರಾ ಆಮಂತ್ರಣ ಪತ್ರಿಕೆ, ಮುದ್ರಣ ಇತ್ಯಾದಿಗಳಿಗೆ 5,91,960 ರೂ. ವೆಚ್ಚವಾಗಿದ್ದರೆ, ಗಣ್ಯರು ಮತ್ತು ಕಲಾವಿದರ ಸಾರಿಗೆ ವ್ಯವಸ್ಥೆಗೆ 29,16,416 ರೂ. ಖರ್ಚಾಗಿದೆ. ಜಂಬೂಸವಾರಿ ಮೆರವಣಿಗೆಗೆ 37,50,772 ರೂ., ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕಲಾವಿದರ ಸಂಭಾವನೆಗೆ 1,03,64,272 ರೂ. ಖರ್ಚಾಗಿದೆ. ಸ್ತಬ್ಧ ಚಿತ್ರ ನಿರ್ಮಾಣಕ್ಕೆ 18,85,102 ರೂ., ಆನೆಗಳ ನಿರ್ವಹಣೆಗೆ 50 ಲಕ್ಷ ರೂ., ದಸರಾ ಕಾರ್ಯಕ್ರಮಗಳ ವೇದಿಕೆ ಮತ್ತು ವಿದ್ಯುತ್ ಕಾಮಗಾರಿಗಳ ವ್ಯವಸ್ಥೆಗಾಗಿ 93,80,000 ರೂ., ವೆಬ್ ಕ್ಯಾಸ್ಟಿಂಗ್‌ಗೆ 11,09,200 ರೂ. ವೆಚ್ಚವಾಗಿದೆ. ಅರಮನೆಗೆ ಗೌರವ ಸಂಭಾವನೆಯಾಗಿ 40 ಲಕ್ಷ ರೂ., ದೂರದರ್ಶನದಲ್ಲಿ ಜಂಬೂಸವಾರಿ ನೇರಪ್ರಸಾರಕ್ಕೆ 6,22,513 ರೂ., ದಸರಾ ಆನೆಗಳು ಹಾಗೂ ಕಾವಾಡಿಗರ ವಿಮೆಗೆ 24 ಸಾವಿರ ರೂ. ಭರಿಸಲಾಗಿದೆ.
ದಸರಾ ಸಂಬಂಧ ಉಪ ಸಮಿತಿ ಸಭೆಗೆ ಲೇಖನ ಸಾಮಾಗ್ರಿಗೆ 3245 ರೂ., ಉನ್ನತ ಮಟ್ಟದ ಸಮಿತಿ ಸಭೆ ಶಿಷ್ಟಾಚಾರಕ್ಕೆ ಹೋಟೆಲ್ ಮತ್ತು ಇತರೆ ವೆಚ್ಚಗಳಿಗೆ 47250 ರೂ., ದಸರಾ ಸಂಬಂಧ ನಡೆದ ವಿವಿಧ ಸಭೆಗಳಿಗೆ ಕಾಫಿ, ಟೀ, ಸ್ಮ್ಯಾಕ್ಸ್ ಗೆ 40,878 ರೂ., ಬಿಎಸ್ ಎನ್ ಎಲ್ ಗೆ 78,668 ರೂ., ಉನ್ನತ ಮಟ್ಟದ ಸಭೆ ಮತ್ತು ವಿಶೇಷಾಧಿಕಾರಿಗಳ ಕಚೇರಿಗೆ ಲೇಖನ ಸಾಮಾಗ್ರಿ ಖರೀದಿಗೆ 90,919 ರೂ., ಜಂಬೂ ಸವಾರಿ ನೇರ ವೀಕ್ಷಣೆ ವಿವರಣೆ ಬಿತ್ತರಿಸಲು ಆಕಾಶವಾಣಿಗೆ 67 ಸಾವಿರ ರೂ. ತೆಗೆದುಕೊಳ್ಳಲಾಗಿದೆ.