ಅಸೆಂಬ್ಲಿ ಚುನಾವಣೆಗೆ ಇಂದು ದಿನಾಂಕ ಫಿಕ್ಸ್
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಮತ್ತು ಚುನಾವಣಾ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವ ಪಡೆದಿರುವ ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಇಂದು ದಿನಾಂಕ ಘೋಷಿಸಲಿದೆ. ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷವು ಚಟುವಟಿಕೆ ಚುರುಕುಗೊಳಿಸಿದ್ದು, ಪಂಜಾಬ್ ಮಾದರಿಯ ಫಲಿತಾಂಶ ಮರುಕಳಿಸುವ ವಿಶ್ವಾಸದಲ್ಲಿದೆ. ಲೋಕಸಭೆ ಚುನಾವಣೆ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಶೀಘ್ರದಲ್ಲಿಯೇ ನಡೆಯುವ ಚುನಾವಣೆಗಳ ಮೇಲೆ ಈ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಪರಿಣಾಮ ಬೀರುವ ನಿರೀಕ್ಷೆಯಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳೂ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿವೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಹಲವು ಸಮಾವೇಶ ಮತ್ತು ಜನಸಂಪರ್ಕ ಕಾರ್ಯಕ್ರಮಗಳನ್ನು ನಡೆಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಹಿರಂಗ ಸಭೆಗಳಲ್ಲಿ ಮಾತನಾಡಿದ್ದರು. ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಹಲವು ಬಾರಿ ಗುಜರಾತ್ಗೆ ಭೇಟಿ ನೀಡಿದ್ದು ಸಂಘಟನೆ ಚುರುಕುಗೊಳಿಸಲು ಯತ್ನಿಸಿದ್ದಾರೆ. ಗುಜರಾತ್ನಲ್ಲಿ ಆಪ್ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆಯುವ ನಿರೀಕ್ಷೆಯಿದೆ.