ಯೋಧನ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಡಿಸಿ
ಶುಕ್ರವಾರ, 15 ಫೆಬ್ರವರಿ 2019 (15:49 IST)
ವೀರಸ್ವರ್ಗವನ್ನು ಅಪ್ಪಿದ ಸಕ್ಕರೆ ನಾಡಿನ ಮೃತ ಯೋಧನ ಕುಟುಂಬಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಸಾಂತ್ವನ ಹೇಳಿದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ . ಎಂ ದೊಡ್ಡಿ ಸಮೀಪದ ಗುಡಿಕೆರೆ ಕಾಲೋನಿಯ ಯೋಧ ಗುರು ಎಚ್ (33) ಹುತಾತ್ಮರಾಗಿದ್ದು , ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ .
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಗುರು ಕುಟುಂಬಕ್ಕೆ ಜಿಲ್ಲಾಡಳಿತದಿಂದ ಯಾವುದೇ ರೀತಿಯ ನೆರವಿಗೆ ಸಿದ್ಧವಿದೆ . ಕುಟುಂಬಸ್ಥರು ಧೈರ್ಯವಾಗಿರಬೇಕು ಹಾಗೆಯೇ ಹೆಚ್ಚಿನ ಆತಂಕಕ್ಕೆ ಒಳಗಾಗಬಾರದು ಎಂದು ಅವರು ಮನವಿ ಮಾಡಿಕೊಂಡರು .
ಮೃತರ ಶರೀರ ಇಂದು ಅಥವಾ ನಾಳೆ ಸ್ವ - ಗ್ರಾಮಕ್ಕೆ ವಾಪಸ್ಸಾಗಲಿದೆ . ಆದರೆ ಇನ್ನೂ ನಾವು ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇವೆ . ಅದು ಬಂದ ನಂತರ ಇದೇ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸುವುದಾಗಿ ಅವರು ಹೇಳಿದರು .
ಈಗಾಗಲೇ ನಾನು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಂತ್ಯಕ್ರಿಯೆಗಾಗಿ ತಾಲೂಕು ಆಡಳಿತದಿಂದ ಎರಡು ಜಾಗವನ್ನು ಗುರುತಿಸಿದ್ದೇವೆ . ಎರಡರಲ್ಲಿ ಯಾವುದು ಸೂಕ್ತ ಎನ್ನುವುದನ್ನು ನೋಡಿ ಅಂತಿಮ ಮಾಡುತ್ತೇವೆ .
ಗುರು ಹುತಾತ್ಮರಾದ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ . ಆದ್ರೆ ದೆಹಲಿಯಲ್ಲಿರುವ ಸಿಆರ್ ಪಿ ಎಫ್ ಕಚೇರಿಗೆ ಕರೆ ಮಾಡಿ ಕೇಳಿದಾಗ ಸಾವಾಗಿರುವುದು ನಿಶ್ಚಿತ ಎಂಬ ಮಾಹಿತಿ ಲಭಿಸಿದೆ ಎಂದು ಅವರು ತಿಳಿಸಿದ್ರು .
ಆ್ಯಪ್ನಲ್ಲಿ ವೀಕ್ಷಿಸಿ x