ಇದ್ದೂ ಇಲ್ಲದಂತಾದ ಸೈನಿಕ ಕಲ್ಯಾಣ ಇಲಾಖೆ: ಮಾಜಿ ಸೈನಿಕರ ಆಕ್ರೋಶ

ಭಾನುವಾರ, 16 ಜನವರಿ 2022 (19:33 IST)
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವಿರುದ್ದ ಮಾಜಿ ಸೈನಿಕರ ಸಂಘದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೈನಿಕ ಕಲ್ಯಾಣ ಮತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕ ಬಿ.ಆರ್. ಶೆಟ್ಟಿ ಅವರನ್ನು ಭೇಟಿಯಾದ ಟಿ.ಶೆಟ್ಟಿಗೇರಿಯ ಮಾಜಿ ಸೈನಿಕ ಸಂಘದ ಪ್ರಮುಖರು, ಇಲಾಖೆ ಮತ್ತು ಅಧಿಕಾರಿಯ ವಿರುದ್ದ ಆಕ್ರೋಶ ಹೊರಹಾಕಿದರು.
ಸೈನಿಕ ಬೋರ್ಡ್’ನಿಂದ ಮಾಜಿ ಸೈನಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಸರಕಾರದ ಸೌಲಭ್ಯಗಳು ಕೂಡಾ ಕಾಲಕ್ಕೆ ಸರಿಯಾಗಿ ಮಾಜಿ ಸೈನಿಕ ಮತ್ತು ಅವರ ಅವಲಂಬಿತ ಕುಟುಂಬಗಳಿಗೆ ದೊರಕುತ್ತಿಲ್ಲ ಎಂದು ಆರೋಪಿಸಿದರು.
ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಜಿ ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮಾಜಿ ಸೈನಿಕರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನೇ ನೀಡುತ್ತಿಲ್ಲ. ಹೀಗಾದಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಅಗತ್ಯ ಕೊಡಗು ಜಿಲ್ಲೆಗೆ ಇದೆಯೇ ಎಂದು ಪ್ರಶ್ನಿಸಿದರು.
ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ: ಕೇವಲ ಹೊಗಳಿಕೆಗಳಿಗೆ ಮಾತ್ರವೇ ಕೊಡಗು ಜಿಲ್ಲೆ ಮತ್ತು ದೇಶದ ಗಡಿ ಕಾದು ಜಿಲ್ಲೆಯಲ್ಲಿ ನೆಲೆಸಿರುವ ಮಾಜಿ ಸೈನಿಕರು ಸೀಮಿತವಾಗಿದ್ದಾರೆ. ಆದರೆ ನೂರಾರು ಸಮಸ್ಯೆಗಳಿದ್ದರೂ ಸ್ಪಂದಿಸುವ ಮನಸ್ಸು ಅಧಿಕಾರಿಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಾಜಿ ಸೈನಿಕರಿಗೆ ಭೂಮಿ ನೀಡಬೇಕೆಂದು ಸರಕಾರವೇ ಹೇಳಿದೆ. ಆದರೆ ಜಿಲ್ಲೆಯಲ್ಲಿರುವ ಪೈಸಾರಿ ಭೂಮಿಗಳನ್ನು ಸರ್ವೆ ನಡೆಸಿ ಅದನ್ನು ಹಂಚುವ ಕೆಲಸ ಇಂದಿಗೂ ನಡೆದಿಲ್ಲ. ಬದಲಿಗೆ ಮಾಜಿ ಸೈನಿಕ ಖರೀದಿ ಮಾಡಿದ ಭೂಮಿಯನ್ನೇ ಆದಾಯದ ಅಂಗವೆಂದು ಪರಿಗಣಿಸಿ ಸೌಲಭ್ಯ ದೊರೆಯದಂತೆ ಮಾಡಲಾಗುತ್ತಿದೆ. ಒತ್ತುವರಿ ಮಾಡಿಕೊಂಡು ಕೃಷಿ ಮಾಡಿರುವ ಭೂಮಿಯ ದಾಖಲೆ ಮಾಡಿಕೊಡಲು ಲಕ್ಷ ರೂ.ಗಳ ಬೇಡಿಕೆ ಇಡಲಾಗುತ್ತಿದೆ. ಈ ಬಗ್ಗೆ ಸೈನಿಕ ಬೋರ್ಡ್ ಏನು ಕ್ರಮ ಕೈಗೊಂಡಿದೆ ಎಂದು ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಪ್ರಶ್ನಿಸಿದರು.
ಇಂದಿನವರೆಗೂ ಒಂದೇ ಒಂದು ಸೈನಿಕ ಅದಾಲತ್ ಕೂಡ ನಡೆಸಿಲ್ಲ. ಹೀಗಾದಲ್ಲಿ ಮಾಜಿ ಸೈನಿಕರ ಸಮಸ್ಯೆಗಳು ಪರಿಹಾರವಾಗಲು ಹೇಗೆ ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಗೆ ಬೇರೆ ಜಿಲ್ಲೆಗಳ ಪ್ರಭಾರ ಕರ್ತವ್ಯ ನಿರ್ವಹಣೆ ಹೊಂದಿರುವ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಆದರೂ ಕೂಡಾ ಮಡಿಕೇರಿ ಕಚೇರಿಯಲ್ಲಿ ಜಂಟಿ ನಿರ್ದೇಶಕರು ಹಾಜರಿರುವ ದಿನಗಳ ಬಗ್ಗೆ ಪತ್ರಿಕೆ ಮತ್ತು ರೇಡಿಯೋದಲ್ಲಿ ಮಾಹಿತಿ ನೀಡುವಂತಾಗಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ನಿರ್ದೇಶಕರು, ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಇದೇ ಸಂದರ್ಭ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಅಧಿಕಾರಿಗೆ ಹಸ್ತಾಂತರಿಸಿ ಬೇಡಿಕೆ ಮತು ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಲಾಯಿತು.
ಈ ಸಂದರ್ಭ ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ಎ.ವಿಶ್ವನಾಥ್, ಸಹ ಕಾರ್ಯದರ್ಶಿ ಎ.ಪಿ. ಮೋಟಯ್ಯ ಸೇರಿದಂತೆ ಪ್ರಮುಖರು ಹಾಜರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ