ದೇಶಿ ತಳಿಗಳಿಂದ ಗುಣಮಟ್ಟದ ಹಾಲು ಉತ್ಪಾದನೆಯ ಜೊತೆಗೆ ಜನರ ಆರೋಗ್ಯ ಸುಧಾರಣೆ ಸಾಧ್ಯ ಎನ್ನುವ ಅಂಶವನ್ನು ತಜ್ಞರು ಸಂಶೋಧನೆಗಳಿಂದ ದೃಢಪಡಿಸಿದ್ದಾರೆ. ದೇಶಿ ತಳಿ ದನಗಳ ಸಂರಕ್ಷಣೆ ಹಾಗೂ ದೇಶಿ ತಳಿ ದನಗಳ ಉತ್ಪಾದಕತೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಅಮೃತ ಮಹಲ್, ಹಳ್ಳಿಕಾರ್, ದೇವಣಿ, ಖಿಲಾರ್, ಮಲ್ನಾಡ್‍ಗಿಡ್ಡ, ಕೃಷ್ಣಾ, ವ್ಯಾಲಿಯಂತಹ ದೇಶಿ ತಳಿಯ ದನಗಳನ್ನು ಹೆಚ್ಚು, ಬಳಕೆಗೆ ತರುವಂತೆ ಮಾಡಲು ಪಶುಸಂಗೋಪನೆ ಇಲಾಖೆ ಉದ್ದೇಶಿಸಿದೆ.
ಇದಕ್ಕಾಗಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮುನಿರಾಬಾದಿನಲ್ಲಿ ದೇಸಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು, ಕಟ್ಟಡ ಹಾಗೂ ಅಗತ್ಯ ಉಪಕರಣಗಳ ಖರೀದಿಗೆ 3 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಬರುವ 6 ತಿಂಗಳ ಒಳಗಾಗಿ ಈ ಕೇಂದ್ರ ಪ್ರಾರಂಭಗೊಂಡು ಲೋಕಾರ್ಪಣೆಯಾಗಲಿದೆ.
ದೇಸಿ ಹೋರಿಗಳಿಂದ ವೀರ್ಯವನ್ನು ಸಂಗ್ರಹಿಸಿ, ಸಂಸ್ಕರಿಸಿ, ರಾಜ್ಯದ ಎಲ್ಲ ಜಿಲ್ಲೆಗಳಿಗೆ, ಆಯಾ ಪ್ರದೇಶದ ಭೌಗೋಳಿಕ ಹವಾಗುಣಕ್ಕೆ ಹೊಂದಿಕೊಳ್ಳುವಂತಹ ದೇಶೀಯ ತಳಿಗಳ ದನಗಳನ್ನು ಆಯಾ ಭಾಗಕ್ಕೆ ಪೂರೈಕೆಯಾಗುವ ರೀತಿಯಲ್ಲಿ ವೀರ್ಯ ಸಂಸ್ಕರಣಾ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ 6. 55 ಕೋಟಿ ರೂ. ಅನುದಾನವನ್ನು 2017-18 ನೇ ಸಾಲಿಗೆ ಒದಗಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.