ನೆನ್ನೆ ದಿನ ಗ್ರಾಮದ ಕೃಷಿಕರಾದ ಪುಲಿಯಂಡ ಜಗದೀಶ್ ಮತ್ತು ಅಯ್ಯಪ್ಪನವರ ಭತ್ತದ ಗದ್ದೆಗೆ ಧಾಳಿ ಮಾಡಿದ ಕಾಡಾನೆಗಳು ಇನ್ನೇನು ಮುಂದಿನ ಹತ್ತು ದಿನಗಳಲ್ಲಿ ಕಟಾವು ಮಾಡಬೇಕಿದ್ದ ಬೆಳೆಯನ್ನು ನಾಶ ಮಾಡಿವೆ.ಎರಡು ತಿಂಗಳ ಹಿಂದೆ ಕೂಡ ಇಲ್ಲಿ ಕಾಡಾನೆಗಳು ದಾಳಿ ಮಾಡಿ ನಷ್ಟ ಮಾಡಿದ್ದವು.ಈಗ ಪುನಃ ಗದ್ದೆಯನ್ನು ತೊಯ್ದಾಡಿವೆ.ಹೀಗಾದರೆ ಭತ್ತದ ಕೃಷಿಯನ್ನು ಮಾಡುವುದು ಹೇಗೆ ಎಂಬ ಮೂಲಭೂತ ಪ್ರಶ್ನೆ ಎದುರಾಗಿದೆ ಎಂದು ಸುಮಾರು ಹತ್ತು ಏಕರೆ ಪ್ರದೇಶದಲ್ಲಿ ಭತ್ತ ಬೆಳೆದಿರುವ ಪುಲಿಯಂಡ ಜಗದೀಶ್ ಆತಂಕ ವ್ಯಕ್ತಪಡಿಸಿದ್ದಾರೆ.ಲಾಭ ನಷ್ಟಗಳ ಸಮತೋಲನದಲ್ಲಿ ಭತ್ತದ ಕೃಷಿ ಮಾಡುತ್ತಿದ್ದು ಇನ್ನು ಮುಂದಕ್ಕೆ ಭತ್ತದ ಕೃಷಿಗೆ ಎಳ್ಳು ನೀರು ಬಿಡುವುದೊಂದೇ ಪರಿಹಾರ ಮಾರ್ಗ ಎಂದು ಮತ್ತೋರ್ವ ಕೃಷಿಕ ಪುಲಿಯಂಡ ಅಯ್ಯಪ್ಪ ನೋವನ್ನು ತೋಡಿಕೊಂಡರು.