ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡ ವಾಗ್ದಾಳಿ

ಬುಧವಾರ, 4 ಅಕ್ಟೋಬರ್ 2017 (13:49 IST)
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಭ್ರಮೆಯಲ್ಲಿದೆ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವುದನ್ನು ಜನತೆ ತೀರ್ಮಾನಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದಲೂ ಜೆಡಿಎಸ್ ಪಕ್ಷದ ಬಗ್ಗೆ ತಾತ್ಸಾರದ ಮಾತುಗಳನ್ನಾಡುತ್ತಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಬಿಟ್ಟು ಹೋದ ನಂತರ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು ಎನ್ನುವುದು ಅವರು ಮರೆಯಬಾರದು ಎಂದು ಟಾಂಗ್ ನೀಡಿದ್ದಾರೆ.
 
ಸಿಎಂ ಸಿದ್ದರಾಮಯ್ಯರನ್ನು ಗುರುತಿಸಿ ಉಪ ಮುಖ್ಯಮಂತ್ರಿ ಹುದ್ದೆ ನೀಡಿದ್ದೆ. ಜೆಡಿಎಸ್ ಪಕ್ಷದಲ್ಲಿ ರಾಜಕೀಯವಾಗಿ ಪ್ರಬುದ್ಧರಾದರೂ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಟೀಕಿಸುವುದು ಬಿಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ತರಬೇಕು ಎನ್ನುವ ಬಗ್ಗೆ ಜನತೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಇಳಿಮುಖದತ್ತ ಸಾಗುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
 
ಕಾಂಗ್ರೆಸ್ ಪಕ್ಷದ ಉನ್ನತಿಯೋ ಅವನತಿಯೋ ಎನ್ನುವುದು ಜನತೆ ತೀರ್ಮಾನಿಸುತ್ತಾರೆ. ಅಹಂಕಾರದಿಂದ ನಾನೇ ಮುಂದಿನ ಸಿಎಂ ಎಂದು ಹೇಳುತ್ತಾರೆ. ನಾವು ಹಾಗೇ ಹೇಳುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಯಾರು ಸಿಎಂ ಎನ್ನುವುದು ಫಲಿತಾಂಶದ ನಂತರ ಬಹಿರಂಗವಾಗಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ