ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿ ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ ಮಠದ ಪೀಠಾಧಿಪತಿಗಳಾದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಸ್ವಾಮೀಜಿಯವರು ರಾಜ್ಯದ ಕೊಡಗು, ಮಡಕೇರಿ ಹಾಗೂ ಕೇರಳ ರಾಜ್ಯದಲ್ಲಿ ಅತೀವೃಷ್ಠಿಯಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿರುವ ಹಿನ್ನೆಲೆಯಲ್ಲಿ ಸಂತ್ರಸ್ಥರ ನೆರವಿಗೆ ಮುಂದಾಗಿದ್ದಾರೆ. ಮುಗಳಖೋಡದ ಶ್ರೀಮಠದಿಂದ ನಿರಾಶ್ರಿತ ತಾಣಗಳಿಗೆ 11 ಕ್ವಿಂಟಾಲ್ ಗೋದಿ ಹಿಟ್ಟಿನ ಮಾದಲಿ, 11 ಚೀಲ ಚುನಮರಿ ಚೂಡಾ, 10 ಬಾಕ್ಸ್ ಬಿಸ್ಕೇಟ್ ಬಾಕ್ಸಗಳನ್ನು ಕಳುಹಿಸಲಾಯಿತು. ಶ್ರೀಗಳು ಕೊಟ್ಟ ಕರೆಗೆ ಸ್ವಯಂ ಪ್ರೇರಿತರಾಗಿ ಬಂದ ಭಕ್ತ ಸಮೂಹ ಆಹಾರ ಪದಾರ್ಥಗಳನ್ನು ತಯಾರಿಸುವುದಲ್ಲಿ ಪಾಲ್ಗೊಂಡರು.
ದಾಸೋಹದ ಮಹಾಮನೆಯಲ್ಲಿ ಪಂಚಾಕ್ಷರಿ ಮಂತ್ರದೊಂದಿಗೆ ಖಾದ್ಯಗಳ ತಯಾರಿ ಸಾಂಗವಾಗಿ ನಡೆಯಿತು. ಈ ಹಿಂದೆಯೂ ಕೂಡ ನಿರಾಶ್ರಿತರಿಗೆ ಶ್ರೀಗಳು ಸಹಾಯ ಹಸ್ತ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ದಾಸೋಹವನ್ನೆ ಮೂಲ ಮಂತ್ರವನ್ನಾಗಿಸಿಕೊಂಡ ಮುಗಳಖೋಡದ ಮಠ ಕಷ್ಟದಲ್ಲಿ ಇರುವ ಜನರಿಗೆ ಮಾತೃ ಸ್ವರೂಪವಾಗಿ ಕಂಗೊಳಿಸುತ್ತ ಬಸವಾದಿ ಪ್ರಥಮರ ವಾಣಿಯಂತೆ "ದಯವೇ ಧರ್ಮದ ಮೂಲವಯ್ಯ" ಎಂಬ ತಾತ್ವಿಕ ಚಿಂತನೆಯನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಯಶಸ್ವಿಯಾಗಿದ್ದು, ಇದಕ್ಕೆ ಭಕ್ತರು ಸಾಥ್ ನೀಡಿದ್ದಾರೆ.