ಧರ್ಮಸ್ಥಳ: ನೂರಾರು ಜನರ ಶವ ಹೂತು ಹಾಕಿರುವುದಾಗಿ ವ್ಯಕ್ತಿಯೊಬ್ಬ ನೀಡಿದ ದೂರಿನ ಹಿನ್ನಲೆಯಲ್ಲಿ ಎಸ್ಐಟಿ ತಂಡ ಧರ್ಮಸ್ಥಳದಲ್ಲಿ ಈಗ ಆತ ಗುರುತು ಮಾಡಿದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಇದರ ನಡುವೆ ಎಸ್ಐಟಿ ಆದೇಶವೊಂದು ಅಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರಿಗೂ ಸಂಕಷ್ಟ ತಂದೊಡ್ಡಿದೆ.
ಅನಾಮಿಕ ವ್ಯಕ್ತಿ ನಾನು ಶವಗಳನ್ನು ಹೂತಿಟ್ಟಿದ್ದೆ ಎಂದು ದೂರು ಕೊಟ್ಟ ಬೆನ್ನಲ್ಲೇ ಸರ್ಕಾರ ಎಸ್ಐಟಿ ರಚಿಸಿ ತನಿಖೆಗೆ ಆದೇಶಿಸಿತ್ತು. ಇದೀಗ ಪ್ರಣಬ್ ಮೊಹಂತಿ ನೇತೃತ್ವದ ಎಸ್ಐಟಿ ತಂಡ ಧರ್ಮಸ್ಥಳದಲ್ಲಿ ವಿಚಾರಣೆ ಆರಂಭಿಸಿದೆ. ಅನಾಮಿಕ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ.
ಈ ವೇಳೆ ಆತ ತನಗೆ ಶವ ಹೂತಿಡಲು ಯಾರು ಆದೇಶ ನೀಡಿದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಹೇಳಿದ್ದಾನೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಎಸ್ಐಟಿ ತಂಡ 1995 ರಿಂದ ಇಲ್ಲಿಯವರೆಗೆ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರ ಪಟ್ಟಿ ನೀಡುವಂತೆ ಕೇಳಿದೆ. ಹೀಗಾಗಿ ಆ ವರ್ಷದಿಂದ ಇಲ್ಲಿಯವರೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರ ವಿಚಾರಣೆಯನ್ನೂ ಎಸ್ಐಟಿ ನಡೆಸುವ ಸಾಧ್ಯತೆಯಿದೆ.
ಇನ್ನು, ನಿನ್ನೆ ಒಂದು ಜಾಗದಲ್ಲಿ ಅಗೆಯುವ ಕಾರ್ಯ ನಡೆದಿತ್ತು. ಸುಮಾರು 8 ಅಡಿಗಳಷ್ಟು ಅಗೆದರೂ ಏನೂ ಸಿಕ್ಕಿರಲಿಲ್ಲ. ಇಂದು ಅಗೆಯುವ ಕಾರ್ಯಮುಂದುವರಿಯಲಿದ್ದು ಆತ ಗುರುತು ಮಾಡಿದ ಮೂರು ಜಾಗಗಳಲ್ಲಿ ಅಗೆಯುವ ಸಾಧ್ಯತೆಯಿದೆ.