ಧರ್ಮಸ್ಥಳ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿರುವುದು ನಿಜಾನಾ: ಇಲ್ಲಿದೆ ರಿಯಾಲಿಟಿ

Krishnaveni K

ಮಂಗಳವಾರ, 12 ಆಗಸ್ಟ್ 2025 (15:40 IST)
ಮಂಗಳೂರು: ಧರ್ಮಸ್ಥಳ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಹೂತಿಟ್ಟ ಶವಗಳಿಗಾಗಿ ಎಸ್ ಐಟಿ ತಂಡ ಅನಾಮಿಕ ದೂರುದಾರನೊಂದಿಗೆ ಹುಡುಕಾಟ ನಡೆಸುತ್ತಿದೆ. ಇದರ ನಡುವೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂದು ಸುದ್ದಿಯಾಗುತ್ತಿದೆ. ಆದರೆ ಇಲ್ಲಿದೆ ರಿಯಾಲಿಟಿ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಮುನ್ನಲೆಗೆ ಬರುತ್ತಿದ್ದಂತೇ ಇಲ್ಲಿನ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಕೆಲವರಿಗೆ ಧರ್ಮಸ್ಥಳಕ್ಕೆ ಭೇಟಿ ನೀಡುವುದು ಸುರಕ್ಷಿತವೇ ಎಂಬ ಅನುಮಾನಗಳೂ ಮೂಡಿದ್ದವು. ಇವೆಲ್ಲಾ ವದಂತಿಗಳಿಂದಾಗಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂದು ಸುದ್ದಿಯಾಗಿತ್ತು.

ಆದರೆ ಬಲ್ಲ ಮೂಲಗಳ ಪ್ರಕಾರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎಂದಿನಂತೆ ಭಕ್ತರು ಯಾವುದೇ ಭಯವಿಲ್ಲದೇ ದೇವಾಲಯಕ್ಕೆ ಬರುತ್ತಿದ್ದಾರೆ. ಆದರೆ ಈಗ ಧರ್ಮಸ್ಥಳದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಶವಗಳನ್ನು ಹೂತಿಟ್ಟ ಕೇಸ್ ಕಾರಣವಲ್ಲ.

ಧರ್ಮಸ್ಥಳಕ್ಕೆ ಮಳೆಗಾಲದಲ್ಲಿ ಭಕ್ತರ ಸಂಖ್ಯೆ ಪ್ರತೀ ವರ್ಷವೂ ಕೊಂಚ ಕಡಿಮೆಯೇ. ಬಿಟ್ಟೂ ಬಿಡದೇ ಮಳೆ ಸುರಿಯುವ ಸಂದರ್ಭದಲ್ಲಿ ದೂರದಿಂದ ಬರುವ ಭಕ್ತರ ಸಂಖ್ಯೆ ಈ ಸಮಯದಲ್ಲಿ ಪ್ರತೀ ವರ್ಷವೂ ಕಡಿಮೆಯಿರುತ್ತದೆ. ಅದೇ ರೀತಿ ಈ ವರ್ಷವೂ ಇದೆಯಷ್ಟೇ. ಮೊನ್ನೆಯಷ್ಟೇ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ವೀಕೆಂಡ್ ರಜೆಯಿದ್ದರೂ ಭಕ್ತರ ಸಂಖ್ಯೆ ಕೊಂಚ ಕಡಿಮೆ. ಇದು ಸಹಜವೇ ಆಗಿತ್ತು. ಯಾಕೆಂದರೆ ಈ ಹಬ್ಬವನ್ನೂ ಎಲ್ಲರೂ ತಮ್ಮ ಮನೆಯಲ್ಲಿಯೇ ಆಚರಿಸಿಕೊಳ್ಳುತ್ತಾರೆ. ಇನ್ನು, ಗಣೇಶ ಹಬ್ಬದವರೆಗೂ ಧರ್ಮಸ್ಥಳದಲ್ಲಿ ಭಕ್ತರ ಸಂಖ್ಯೆ ಕೊಂಚ ಕಡಿಮೆಯೇ ಇರುತ್ತದೆ. ಮಳೆಗಾಲದ ನಂತರ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಹಾಗಿದ್ದರೂ ಈಗ ಪೊಲೀಸ್ ತನಿಖೆ ನಡೆಯುತ್ತಿರುವ ಕಾರಣ ಕೆಲವರು ಕುಟುಂಬ ಸಮೇತ ಬರಲು ಹಿಂದೇಟು ಹಾಕುವ ಸಾಧ್ಯತೆಯೂ ಇರಬಹುದು.

ಇದರ ಹೊರತಾಗಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಸಹಜವಾಗಿದೆ. ಧರ್ಮಸ್ಥಳ ದೇವಾಲಯದ ಸಮೀಪ ಎಲ್ಲೂ ಶವಗಳಿಗಾಗಿ ಹುಡುಕಾಟ ನಡೆಯುತ್ತಿಲ್ಲ. ನೇತ್ರಾವತಿ ಪಕ್ಕ ನಡೆಯುತ್ತಿದ್ದರೂ ಅಲ್ಲೂ ಸ್ನಾನಘಟ್ಟದಲ್ಲಿ ಎಂದಿನಂತೇ ಭಕ್ತರು ಸ್ನಾನ ಮಾಡಿ ಹೋಗುತ್ತಾರೆ. ಕೊಠಡಿಗಳ ವ್ಯವಸ್ಥೆಯೂ ಎಂದಿನಂತೇ ನಡೆಯುತ್ತಿದೆ. ಇದರಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ