ರಾಹುಲ್ ಗಾಂಧಿ ಜೊತೆಗೆ ಸಿದ್ದರಾಮಯ್ಯ ಮೊಮ್ಮಗ ಪೋಸ್: ಕನ್ನಡ ಬರೆದುಕೊಟ್ಟಿದ್ದು ಯಾರು ಎಂದ ನೆಟ್ಟಿಗರು

Krishnaveni K

ಶನಿವಾರ, 11 ಅಕ್ಟೋಬರ್ 2025 (12:43 IST)
Photo Credit: Instagram
ಬೆಂಗಳೂರು: ಇತ್ತೀಚೆಗೆ ತಾತ ಸಿದ್ದರಾಮಯ್ಯನವರ ಜೊತೆ ರಾಜಕೀಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮೊಮ್ಮಗ ಧವನ್ ರಾಕೇಶ್ ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಪ್ರಾಮಾಣಿಕರನ್ನು ಭೇಟಿ ಮಾಡಲು ಬಯಸುತ್ತೇನೆ ಎಂದಿದ್ದಾರೆ.

ಧವನ್ ರಾಕೇಶ್ ರನ್ನು ನಿಧಾನವಾಗಿ ಸಿದ್ದರಾಮಯ್ಯ ತಮ್ಮ ನಂತರ ರಾಜಕೀಯಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಈಗ ಗುಟ್ಟಿನ ವಿಚಾರವೇನೂ ಅಲ್ಲ. ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕ್ರಮಗಳಲ್ಲಿ ಈಗ ಧವನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಕಾಂಗ್ರೆಸ್ ನ ನಾಯಕರನ್ನೂ ಭೇಟಿ ಮಾಡಿಸುತ್ತಿದ್ದಾರೆ.

ಇದೀಗ ರಾಹುಲ್ ಗಾಂಧಿಯನ್ನು ಭೇಟಿ ಮಾಡಿರುವ ಫೋಟೋಗಳನ್ನು ಧವನ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಸಕ್ರಿಯವಾಗುವ ಸೂಚನೆ ನೀಡಿದ್ದಾರೆ.

ಜೊತೆಗೆ ರಾಹುಲ್ ಗಾಂಧಿಯವರನ್ನು ಹೊಗಳಿ ಸುದೀರ್ಘ ಪೋಸ್ಟ್ ಒಂದನ್ನು ಬರೆದಿದ್ದಾರೆ. ‘ಕಳೆದ ಆಗಸ್ಟ್ 8 ರಂದು, ನಮ್ಮ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸದಾವಕಾಶ ನನಗೆ ದೊರೆಯಿತು. ಪ್ರಾಮಾಣಿಕ ನಾಯಕರನ್ನು ನಾನು ಎಷ್ಟರ ಮಟ್ಟಿಗೆ ಗೌರವಿಸುತ್ತೇನೆ ಮತ್ತು ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂಬುದನ್ನು ನನ್ನ ತಾತ ಗುರುತಿಸಿದ್ದರಿಂದ ಇದು ಸಾಧ್ಯವಾಯಿತು. ಈ ರಾಜಕೀಯ ವಲಯದಲ್ಲಿ ಪ್ರಾಮಾಣಿಕತೆಯನ್ನು ಬಹುತೇಕವಾಗಿ ಕಡೆಗಣಿಸಲಾಗಿದೆ. ಆದರೆ, ಇದೇ ವಲಯದಲ್ಲಿ ಪ್ರಾಮಾಣಿಕವಾಗಿರಲು ಯತ್ನಿಸುವ, ತನ್ನ ನಂಬಿಕೆಗೆ ಬದ್ಧವಾಗಿರುವ ನಾಯಕರನ್ನು ಭೇಟಿಯಾಗಲು ನಾನು ಇಚ್ಛಿಸುತ್ತೇನೆ.

ರಾಜಕಾರಣವು ನನ್ನ ಬದುಕಿನ ಹಿನ್ನೆಲೆಯ ಒಂದು ಭಾಗವಾಗಿರುವುದು ನಿಜ. ಆದರೆ, ನಿರಂತರ ವಿರೋಧದ ನಡುವೆಯೂ ತನ್ನ ನಂಬಿಕೆ ಹಾಗೂ ಸಿದ್ದಾಂತದ ಪರ ನಿಲ್ಲಲು ರಾಹುಲ್‌ ಗಾಂಧಿ ನಿರ್ಧರಿಸಿದರು. ಇಂತಹ ನಾಯಕನನ್ನು ಭೇಟಿಯಾಗಿದ್ದು ನಿಜವಾಗಿಯೂ ವಿಭಿನ್ನ ಅನುಭವವಾಗಿತ್ತು. ಅವರೊಂದಿನ ಸ್ವಲ್ಪ ಕ್ಷಣಗಳ ಕಾಲ ಮಾತನಾಡಿದೆ. ಅವರ ಕುರಿತು ನನ್ನಲ್ಲಿರುವ ಅಪಾರ ಗೌರವದ ಬಗ್ಗೆ ತಿಳಿಸಿದೆ. ಈಗ ವಿದ್ಯಾರ್ಥಿಯಾಗಿ, ಮುಂದೆ ವಕೀಲನಾಗಿ ನಾನು ಅವರ ಜೊತೆ ನಿಲ್ಲಲು, ಅವರೊಂದಿಗೆ ಹೆಜ್ಜೆ ಹಾಕಲು ಬಯಸುತ್ತೇನೆಂದು ಹೇಳಿದೆ.

ಈಗ ನಾವೆಲ್ಲರೂ ಸ್ವಲ್ಪ ಹೆಚ್ಚು ಮುನ್ನೆಚ್ಚರಿಕೆಯಿಂದ ಯೋಚಿಸಬೇಕಿದೆ. ಹೆಚ್ಚು ಜಾಗೃತರಾಗಬೇಕಿದೆ. ಸತ್ಯ, ನಿಷ್ಠೆ ಹಾಗೂ ಪಾರದರ್ಶಕತೆಯ ಮೂಲಕ ದೇಶವನ್ನು ಮುನ್ನಡೆಸುವ ನಾಯಕರನ್ನು ಗೌರವಿಸಬೇಕಿದೆ. ರಾಹುಲ್ ಗಾಂಧಿ ಅವರು ಸಾರ್ವಜನಿಕರು ಹಾಗೂ ಮಾಧ್ಯಮಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸುತ್ತಾರೆ. ಅದೇ ರೀತಿ, ನಾವು ಸಹ ಸಂವಾದಕ್ಕೆ ಮುಂದಾಗಬೇಕಿದೆ. ಪ್ರಾಮಾಣಿಕ ಸಂವಾದವನ್ನು ನಾನು ಯಾವಾಗಲೂ ಸ್ವಾಗತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇನ್ನು ಇಷ್ಟು ಉದ್ದದ ಸಂದೇಶವನ್ನು ಕನ್ನಡದಲ್ಲೇ ಬರೆದಿರುವುದಕ್ಕೆ ನೆಟ್ಟಿಗರು ಕಾಲೆಳೆದಿದ್ದು ಇದನ್ನು ಹೇಗೆ ಬರೆದ್ರಿ? ನಿಮಗೆ ಕನ್ನಡ ಸರಿಯಾಗಿ ಮಾತನಾಡಲೂ ಬರೋದಿಲ್ಲ ಅಲ್ವಾ? ಗೂಗಲ್ ನಲ್ಲಿ ಟ್ರಾನ್ಸಲೇಷನ್ ಮಾಡಿದ್ರಾ ಇಲ್ಲಾ ಯಾರಾದರೂ ಬರೆದುಕೊಟ್ರಾ ಎಂದು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ