ಮದುವೆಯಲ್ಲೂ ಡಿಜಿಟಲ್ ಇಂಡಿಯಾ!
ಭಾರತದಲ್ಲಿ ಡಿಜಿಟಲ್ ಯುಗ ಆರಂಭವಾಗಿ ಸಾಕಷ್ಟು ದಿನಗಳು ಕಳೆದಿದೆ. ಇದು ಪ್ರತಿಯೊಂದು ಕ್ಷೇತ್ರಕ್ಕೂ ಕಾಲಿಡುವ ಮಟ್ಟಕ್ಕೆ ಬೆಳೆಯುತ್ತಿದೆ. ಇಲ್ಲೊಂದು ಮದುವೆಯಲ್ಲಿ ಡೋಲು ಬಾರಿಸುವವ ಹಣವನ್ನು ನಗದು ರೂಪದಲ್ಲಿ ಪಡೆಯದೇ ತನ್ನ ಡೋಲಿನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಅಂಟಿಸಿಕೊಂಡು ಪಡೆಯುತ್ತಿರುವುದು ಗಮನಸೆಳೆದಿದೆ. ಈ ರೀತಿ ಡೋಲಿನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಅಂಟಿಸಿಕೊಂಡು ಹಣ ಪಡೆಯುತ್ತಿದ್ದ ವೀಡಿಯೋವನ್ನು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಮದುವೆಯಲ್ಲೂ ಡಿಜಿಟಲ್ ಇಂಡಿಯಾ ಕಾಣಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ವ್ಯವಹಾರ ಸೇರಿದಂತೆ ಪ್ರತಿಯೊಂದು ಕೆಲಸ ಕಾರ್ಯಗಳು ಡಿಜಿಟಲ್ ಮೂಲಕ ನಡೆಯುತ್ತಿದ್ದು, ಜನರು ಉತ್ತಮ ಸೇವೆ ಪಡೆಯುತ್ತಿದ್ದಾರೆ. ಅದರಲ್ಲೂ ಡಿಜಿಟಲ್ ಆರ್ಥಿಕತೆ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಪ್ರತಿ ಅಂಗಡಿಗಳಲ್ಲೂ ಕ್ಯೂಆರ್ ಕೋಡ್ ಬಳಸಿ ನಗದು ರಹಿತ ವ್ಯವಹಾರ ಹೆಚ್ಚಾಗಿ ನಡೆಯುತ್ತಿದೆ.