ವಿವಾದಿತ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಖಂಡನೆ

ಶುಕ್ರವಾರ, 17 ಡಿಸೆಂಬರ್ 2021 (19:29 IST)
ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ಶಾಸಕರೊಬ್ಬರ ಮಾತುಗಳನ್ನು ಪ್ರದೇಶ ಕಾಂಗ್ರೆಸ್ ಸಮಿತಿ  ತೀವ್ರವಾಗಿ ಖಂಡಿಸಿದೆ.
 
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ''ಕಾಂಗ್ರೆಸ್ ಪಕ್ಷವು ಲಿಂಗ  ಸಮಾನತೆ ಪ್ರತಿಪಾದಿಸುತ್ತಾ, ಮಹಿಳೆಯರ ಘನತೆಯನ್ನು ಎತ್ತಿಹಿಡಿಯುತ್ತಾ ಬಂದಿದೆ. ಆದರೆ, ನಮ್ಮದೇ ಪಕ್ಷದ ಶಾಸಕರೊಬ್ಬರು ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಮಾತನಾಡಿರುವುದು ತಪ್ಪು' ಎಂದು ಹೇಳಿದ್ದಾರೆ.
 
ಶಾಸನಸಭೆಯಲ್ಲಿ ನಮ್ಮ ಪಕ್ಷದ ಶಾಸಕರೊಬ್ಬರ ಮಾತುಗಳು ವೈಯಕ್ತಿಕವಾಗಿಯೂ ನನಗೆ ಆಘಾತ ತಂದಿದೆ. ಈ ಘಟನೆಗಾಗಿ ನಾಡಿನ ಮಹಿಳಾ ಸಮುದಾಯದ ಕ್ಷಮೆ ಕೇಳುತ್ತೇನೆ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ  ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ.
 
ವಿಧಾನಸಭೆಯಲ್ಲಿ ಆಡಿದ ಮಾತುಗಳಿಗಾಗಿ ಸಂಬಂಧಪಟ್ಟ ಶಾಸಕರು ಈಗಾಗಲೇ ಸದನದ ಮೂಲಕವೇ ಕ್ಷಮೆ ಯಾಚಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿರುವ ನಮ್ಮೆಲ್ಲರ ನಡವಳಿಕೆ ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
 
ಶಾಸನಸಭೆ ಪ್ರಜಾತಂತ್ರದ ದೇಗುಲ. ಜನಪ್ರತಿನಿಧಿಗಳಾಗಿ ಸದನದಲ್ಲಿ ನಮ್ಮ ಮಾತು, ನಡವಳಿಕೆ ಶುದ್ಧವಾಗಿರಬೇಕು.
ಆದರ್ಶದ ನಡವಳಿಕೆಯನ್ನು ರಾಜಕೀಯ ಬದುಕಿನಲ್ಲಿರುವ ನಾವೆಲ್ಲರೂ ಎಚ್ಚರಿಕೆಯಿಂದ ಪಾಲನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ