ಸೋನಿಯಾ ಗಾಂಧಿ ಪ್ರಧಾನಿ ಪದವಿ ಬಿಟ್ಟ ತ್ಯಾಗಮಯಿ ಎಂದು ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಟಾಂಗ್

Krishnaveni K

ಸೋಮವಾರ, 4 ಆಗಸ್ಟ್ 2025 (10:39 IST)
ಬೆಂಗಳೂರು: ಸೋನಿಯಾ ಗಾಂಧಿ ಪ್ರಧಾನಿ ಪದವಿ ಬಿಟ್ಟುಕೊಟ್ಟ ತ್ಯಾಗಮಯಿ ಎನ್ನುತ್ತಾ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಕುರ್ಚಿ ಬಿಡಲ್ಲ ಎನ್ನುತ್ತಿರುವ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರಾ ಎಂಬ ಚರ್ಚೆ ಈಗ ರಾಜ್ಯ ರಾಜಕೀಯದಲ್ಲಿ ಶುರುವಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಡಿಕೆ ಶಿವಕುಮಾರ್ ಪ್ರಧಾನಿ ಹುದ್ದೆ ಬೇಡ ಎಂದಿದ್ದ ಸೋನಿಯಾ ಗಾಂಧಿಯವರನ್ನು ಉಲ್ಲೇಖಿಸಿ ಹಾಡಿಹೊಗಳಿದ್ದಾರೆ. ಈ ಮೂಲಕ ತಮಗೆ ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪದ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರಾ ಎಂಬ ಅನುಮಾನ ಶುರುವಾಗಿದೆ.

ಡಿಕೆ ಶಿವಕುಮಾರ್ ಹೈಕಮಾಂಡ್ ಮುಂದೆಯೇ ಈ ಹೇಳಿಕೆ ನೀಡಿದ್ದು ವಿಶೇಷವಾಗಿದೆ. ಈ ಹಿಂದೆ ಸೋನಿಯಾ ಗಾಂಧಿಗೆ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಸೋನಿಯಾ ಗಾಂದಿಯವರು ನನಗೆ ಅಧಿಕಾರ ಮುಖ್ಯವಲ್ಲ ಎಂದರು. ಆರ್ಥಿಕ ತಜ್ಞ ಪ್ರಧಾನಿಯಾದ್ರೆ ದೇಶ ಉಳಿಸಬಹುದು ಎಂದು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದ್ರು. ಇಂದು ಯಾರೂ ಅಷ್ಟು ಸುಲಭವಾಗಿ ತಮ್ಮ ಸ್ಥಾನ ಬಿಟ್ಟುಕೊಡಲ್ಲ. ಪಂಚಾಯತಿ ಸ್ಥಾನವಾದರೂ ಸರಿ, ತ್ಯಾಗ ಮಾಡಲು ಸಿದ್ಧರಿರಲ್ಲ. ಅಂತಹದ್ದರಲ್ಲಿ ಸೋನಿಯಾ ಪ್ರಧಾನಿ ಸ್ಥಾನವನ್ನೇ ತ್ಯಾಗ ಮಾಡಿದ್ದರು ಎಂದು ಹಾಡಿ ಹೊಗಳಿದ್ದಾರೆ.

ಒಂದೆಡೆ ಸೋನಿಯಾರನ್ನು ಹೊಗಳುವ ಮೂಲಕ ಡಿಕೆ ಶಿವಕುಮಾರ್ ಹೈಕಮಾಂಡ್ ಮುಂದೆಯೇ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದರಾ ಎಂದು ಗುಸು ಗುಸು ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ