ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 77ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ ಅವರಿಗೆ ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ.
ಇದೀಗ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಹಾರೈಸಿದ ರೀತಿ ಗಮನ ಸೆಳೆಯುತ್ತಿದೆ. ಕಳೆದ ಕೆಲ ದಿನಗಳಿಂದ ರಾಜ್ಯದ ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣದ ನಡುವೆ ಪೈಪೋಟಿ ಜೋರಾಗಿತ್ತು.
ಕರ್ನಾಟಕ ಸಿಎಂ ಕುರ್ಚಿ ಬದಲಾವಣೆ ಸಂಬಂಧ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ವಿಚಾರವಾಗಿ ಹೈಕಮಾಂಡ್ ಅನ್ನು ಭೇಟಿಯಾಗಿ ಸುದೀರ್ಘ ಮಾತುಕತೆಯಲ್ಲಿ ಭಾಗಿಯಾಗಿದ್ದರು. ಆದರೆ ಈಚೆಗೆ ಕಾಂಗ್ರೆಸ್ ಹೈಕಮಾಂಡ್ ಜತೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಶಾಸಕರ ಬೆಂಬಲವಿದ್ದು, ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲವಿಲ್ಲ ಎಂಬ ವಿಚಾರ ಹೊರಬಿದ್ದಿತ್ತು. ಇದನ್ನು ಸಿದ್ದರಾಮಯ್ಯನವರೇ ಬಹಿರಂಗವಾಗಿ ಹೇಳಿದ್ದರು.
ಹೈಕಮಾಂಡ್ ಭೇಟಿ ಬಳಿಕ ಡಿಕೆ ಶಿವಕುಮಾರ್ ಅವರೇ ಕರ್ನಾಟಕದಲ್ಲಿ ಸಿಎಂ ಬದಲಾವಣೆಯಿಲ್ಲ, ಸುರ್ಜೇವಾಲೇ ಅವರೇ ಈ ಸಂಬಂಧ ಹೇಳಿದ್ಮೇಲೆ ಮತ್ತೇನಿದೆ ಎಂದು ಎಲ್ಲ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದರು.
ಆದರೆ ಇಂದು ಕೂಡಾ ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತುಕತೆಯಿದೆ. ಈ ಎಲ್ಲ ಬೆಳವಣಿಗೆ ಮಧ್ಯೆ ಸಿದ್ದರಾಮಯ್ಯ ಬರ್ತಡೇ ದಿನ ಡಿಕೆ ಶಿವಕುಮಾರ್ ಅವರ ಶುಭಾಶಯ ಗಮನ ಸೆಳೆಯುತ್ತದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿದ್ದರಾಮಯ್ಯಗೆ ಶುಭಕೋರಿದ ಡಿಕೆ ಶಿವಕುಮಾರ್ ಅವರು, ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದ್ದೀರಿ. ಕನ್ನಡಿಗರ ಹಿತವನ್ನು ಕಾಪಾಡಲು, ಕರ್ನಾಟಕದ ಕಲ್ಯಾಣಕ್ಕಾಗಿ ನಮ್ಮ 'ಕೈ' ಹೀಗೆ ಜೊತೆಯಾಗಿರಲಿದೆ.
ದೇವರು ತಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸುತ್ತೇನೆ.