ಒಕ್ಕಲಿಗರು ದಡ್ಡರಲ್ಲ, ಬಿಜೆಪಿ ಸ್ವಾಮೀಜಿಗಳನ್ನು ಭೇಟಿ ಮಾಡಿದ್ರೆ ವೋಟ್ ಹಾಕಲ್ಲ: ಡಿಕೆ ಶಿವಕುಮಾರ್

Krishnaveni K

ಬುಧವಾರ, 10 ಏಪ್ರಿಲ್ 2024 (12:07 IST)
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಇಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿರುವ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಒಕ್ಕಲಿಗರು ಯಾರೂ ದಡ್ಡರಲ್ಲ, ಸ್ವಾಮೀಜಿಗಳೂ ದಡ್ಡರಲ್ಲ. ಏನೋ ಮಠಕ್ಕೆ ಭೇಟಿ ನೀಡಿದ್ದಾರೆ. ಅದಕ್ಕೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಅವರು ಸ್ವಾಮೀಜಿಗಳನ್ನು ಭೇಟಿ ಮಾಡಿದ ತಕ್ಷಣ ಒಕ್ಕಲಿಗರು ಬಿಜೆಪಿ, ಜೆಡಿಎಸ್ ಗೆ ಮತ ಹಾಕಲ್ಲ ಎಂದು ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಇಂದು ಸದಾಶಿವನಗರ ನಿವಾಸದಲ್ಲಿ ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರೊಂದಿಗೆ ಮಾತನಾಡಿದರು. ಈ  ವೇಳೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಜೊತೆಯಾಗಿ ಸ್ವಾಮೀಜಿಗಳ ಭೇಟಿಗೆ ತೆರಳಿದ ವಿಚಾರ ಪ್ರಸ್ತಾಪವಾಗಿದೆ.

ಒಕ್ಕಲಿಗರ ಸಮುದಾಯದ ಮುಖ್ಯಮಂತ್ರಿಯನ್ನು ಯಾಕೆ ಅಧಿಕಾರದಿಂದ ಕೆಳಗಿಳಿಸಿದಿರಿ ಎಂದು ಸ್ವಾಮೀಜಿಗಳು ಕೇಳಬೇಕಾಗಿತ್ತು. ಅಧಿಕಾರ ಕಿತ್ತುಕೊಂಡವರು ಅಲ್ಲೇ ಇದ್ದರಲ್ವಾ? ಬಿಡಿ, ನಾನು ಸ್ವಾಮೀಜಿಗಳ ಬಗ್ಗೆ ಏನೂ ಮಾತನಾಡಲು ಹೋಗಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ