ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ಸಿಕ್ಕಿದ ಹಣದಿಂದ ಮಹಿಳೆಯೊಬ್ಬರು ಫ್ರಿಡ್ಜ್ ಖರೀದಿಸಿದ್ದು ಈಗ ಭಾರೀ ಸುದ್ದಿಯಾಗಿದೆ. ಈ ವಿಚಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಮನಕ್ಕೆ ಬಂದಿದ್ದು, ಮಹಿಳೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ನ ಲತಾ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯಿಂದ ತಿಂಗಳಿಗೆ 2000 ರೂ. ಗಳಂತೆ ಬರುತ್ತಿದ್ದ ಹಣವನ್ನು ಕೂಡಿಟ್ಟು ಫ್ರಿಡ್ಜ್ ಖರೀದಿಸಿದ್ದಾರೆ. ಈ ವಿಚಾರ ತಿಳಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದು, ಬಡವರ ಬದುಕಿನ ಗುಣಮಟ್ಟ ಹೆಚ್ಚಿಸಿದ ಸಾರ್ಥಕತೆ ಸಾಕು ನಮಗೆ ಎಂದಿದ್ದಾರೆ.
ರಾಜಕೀಯ ಮಾಡಲೆಂದೇ ಎಷ್ಟೋ ಜನ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ ನಾವು ಬಡವರ ಮೇಲೆ ರಾಜಕೀಯ ಮಾಡಲ್ಲ, ಬಡವರ ಬದುಕು ಕಟ್ಟುವ ಕೆಲಸ ಮಾಡುತ್ತೇವೆ. ಆ ಸಾರ್ಥಕತೆ ನಮಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಈ ಫ್ರಿಡ್ಜ್ ಖರೀದಿಗೆ ಲತಾ 17,500 ರೂ. ಪಾವತಿಸಿದ್ದಾರಂತೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಮನೆಗೆ ಫ್ರಿಡ್ಜ್ ತಂದು ಅದಕ್ಕೆ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.