ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮೂಲತಃ ನಮ್ಮ ಪಕ್ಷದವರೇ ಅಲ್ಲ, ವಲಸೆ ಬಂದವರಾದರೂ ಅವರಿಗೆ ನಾವು ಅವಕಾಶ ಕೊಟ್ಟಿದ್ದೇವೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿಕೆ ಶಿವಕುಮಾರ್ ಸಹೋದರ, ಡಿಕೆ ಸುರೇಶ್ ರಾಮನಗರದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಸಿದ್ದರಾಮಯ್ಯನವರನ್ನು ವಲಸೆ ಬಂದವರು ಎಂದಿದ್ದಾರೆ.
ಸಿದ್ದರಾಮಯ್ಯ ಬೇರೆ ಪಕ್ಷದಿಂದ ವಲಸೆ ಬಂದವರು, ಆದರೂ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಇಂದು ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಅವರು ನಮ್ಮ ನಾಯಕರಾಗಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ಸಿದ್ದರಾಮಯ್ಯ ಬಡವರಿಗಾಗಿ ಒಂದಷ್ಟು ಯೋಜನೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಹೊಸ ಕಾಯಕಲ್ಪ ನೀಡಿದ್ದಾರೆ. ಎಲ್ಲವೂ ಹಣೆಯಲ್ಲಿ ಬರೆದರೆ ಮಾತ್ರ ಸಾಧ‍್ಯ ಎಂದಿದ್ದಾರೆ.
ಜೆಡಿಎಸ್ ನಲ್ಲಿ ಸಿದ್ದರಾಮಯ್ಯನವರನ್ನು ಬೀಗ ಹಾಕಿ ಕೂಡಿಸಿದ್ರು. ಆದರೆ ಇಲ್ಲಿ ಅವರ ಯೋಗ ಬರೆದಿತ್ತು. ಹಾಗೆಯೇ ನಿಮ್ಮ ಯೋಗವೂ ಬರೆದಿರಬಹುದು. ಹೀಗಾಗಿ ಯಾರನ್ನೂ ತಡೆಯಲು ಹೋಗಬೇಡಿ. ನಿಮ್ಮ ಹಣೆಯಲ್ಲಿ ಏನು ಬರೆದಿದೆಯೋ ಹಾಗೆ ಆಗುತ್ತೆ. ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.