ಬೆಂಗಳೂರು : ಇಂದು ವಿಶ್ವ ಪರಿಸರ ದಿನಾಚರಣೆ ಯಾಗಿದ್ದು, ಈ ದಿನದಂದೇ ಅರಣ್ಯಾಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಥಣಿಸಂದ್ರ ರಾಚೇನಹಳ್ಳಿಗೆ ಕೆರೆ ಬಳಿ ಬಿಬಿಎಂಪಿಯಿಂದ ಗಿಡ ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪಾಲಿಕೆ ಅಧಿಕಾರಿಗಳು ಪಾರ್ಕ್ ಮಧ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಡಿಕೆಶಿ, ಬಿಬಿಎಂಪಿ ಮಹಿಳಾ ಅಧಿಕಾರಿಗೆ ಬೈದರು.
ಕಾಮನ್ ಸೆನ್ಸ್ ಇರಬೇಕು ಎಲ್ಲಿ ಗಿಡ ನಡಬೇಕು ಅಂತ ಹೇಳಿದರು. ಪಾರ್ಕ್ ನಲ್ಲಿ ಗಿಡ ನಡುವ ಕಾರ್ಯಕ್ರಮ ಮಾಡಿದ್ದಕ್ಕೆ ಡಿಕೆಶಿ ಬಳಿಕ ನಡೆದ ತಮ್ಮ ಭಾಷಣದಲ್ಲೂ ಅಸಮಧಾನ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯವರು ನನ್ನ ಕೈಯಲ್ಲಿ ಪಾರ್ಕ್ ನಲ್ಲಿ ಗಿಡ ಹಾಕಿಸಿದ್ದಾರೆ. ಇದು ತಪ್ಪು, ಗಿಡವನ್ನು ಪಾರ್ಕ್ನಲ್ಲಿ ಹಾಕಿಸುವುದಲ್ಲ. ಅದರಲ್ಲೂ ನೀವು ಅರಣ್ಯ ಇಲಾಖೆಯವರು. ಪಾರ್ಕ್ ನಲ್ಲಿ ಚೆನ್ನಾಗಿರುವ ಜಾಗದಲ್ಲಿ ಗಿಡ ಹಾಕಿಸುವುದಲ್ಲ. ಪಾರ್ಕ್ ನಲ್ಲಿ ಖಾಲಿ ಇರುವ ಜಾಗದಲ್ಲಿ ಹಾಕಿಸಬೇಕಿತ್ತು. ಗಿಡ ಹಾಕಬೇಕಾದ್ರೆ ಯೋಚನೆ ಮಾಡಬೇಕು.
ಗಿಡಕ್ಕೆ ನನ್ನ ಹೆಸರು, ಕೃಷ್ಣ ಬೈರೇಗೌಡ ಅವರ ಹೆಸರು ಹಾಕಿದ್ದೀರಾ. ಗಿಡಗಳಿಗೆ ಏಕೆ ನಮ್ಮ ಹೆಸರು ಇಟ್ಟಿದ್ದೀರಿ. ನಾವು ಬಂದು ಗಿಡ ನೋಡ್ಕೊತ್ತೀವಾ?. ಅದರ ಬದಲಿಗೆ ಶಾಲಾ ಮಕ್ಕಳ ಹೆಸರು ಇಡಿ. ಪಾರ್ಕ್ಗಳಿಗಿಂತ ಹೆಚ್ಚಾಗಿ ರಸ್ತೆ ಸೇರಿದಂತೆ ಖಾಲಿ ಜಾಗದಲ್ಲಿ ಗಿಡ ಹಾಕಿ. ಮಕ್ಕಳು ಗಿಡಗಳನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.