ಕ್ರಿಶ್ಚಿಯನ್ ರಲ್ಲಿ ಇಷ್ಟೆಲ್ಲಾ ಜಾತಿ ಇದೆ ಅಂತ ಅವರಿಗೇ ಗೊತ್ತಿದೆಯೋ ಇಲ್ವೋ

Sampriya

ಶುಕ್ರವಾರ, 12 ಸೆಪ್ಟಂಬರ್ 2025 (17:56 IST)
Photo Credit X
ಬೆಂಗಳೂರು: ಕ್ರಿಶ್ಚಿಯನ್ ಸಮುದಾಯದಲ್ಲಿ ಹಲವಾರು ಜಾತಿಗಳು ಇವೆಯೇ? ಸರಕಾರ ಕೂಡಲೇ ಸ್ಪಷ್ಟೀಕರಣ ಕೊಡಬೇಕು ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ಮಾಡಿ ಸೆ.22ರಿಂದ ಅಕ್ಟೋಬರ್ 7ರವರೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದಿರುವಿಕೆಯ ಮತ್ತೊಂದು ಸಮೀಕ್ಷೆ ಮಾಡುವುದಾಗಿ ತಿಳಿಸಿದ್ದಾರೆ. 

ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಮರಾಠ ಕ್ರಿಶ್ಚಿಯನ್, ಬಲಿಜ ಕ್ರಿಶ್ಚಿಯನ್, ಮಾದಾರ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬೋವಿ ಕ್ರಿಶ್ಚಿಯನ್- ಇಂಥ ಜಾತಿಗಳು ಇವೆಯೇ? ಎಂದು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಹಾಕಿದರು. ಈ ಥರ 47 ಹೊಸ ಜಾತಿಗಳನ್ನು ನಿರ್ಮಿಸಿದ್ದಾರೆ ಎಂದರು.

ಬಹುಶಃ ಇನ್ನೂ 47 ಹೊಸ ಜಾತಿ ಇರುವುದು ಕ್ರಿಶ್ಚಿಯನ್ನರಿಗೇ ಗೊತ್ತಿರಲಾರದು ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಜಾತಿಗಳನ್ನು ಸೃಷ್ಟಿಸಿ ಕ್ರಿಶ್ಚಿಯನ್ ಮತಾಂತರ ಮಾಡಲು ಸರಕಾರ ನಿರ್ಧರಿಸಿ, ಅಧಿಸೂಚನೆ ಹೊರಡಿಸಿದ್ದಾರಾ? ಎಂದು ಕೇಳಿದರು. ಇದನ್ನು ಕೈ ಬಿಡುವುದಾಗಿಯೂ ಹೇಳಿಲ್ಲ ಎಂದು ಟೀಕಿಸಿದರು. ಇದರ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದರು.

ಹಿಂದೂ ಧರ್ಮ, ಹಿಂದೂ ಸಮಾಜವನ್ನು ಒಡೆಯುವ ಕೆಲಸವನ್ನು ಈ ಸರಕಾರ ಮಾಡುತ್ತಿದೆ; ಕೂಡಲೇ ಇದರ ಕುರಿತು ಸ್ಪಷ್ಟೀಕರಣ ನೀಡಬೇಕು. ಇದು ಹಿಂದೂ ಸಮಾಜವನ್ನು ಮತ್ತೊಮ್ಮೆ ವಿಭಜಿಸುವ ಷಡ್ಯಂತ್ರ ಎಂದು ಆಕ್ಷೇಪಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ