ರಾಜ್ಯ ಸರಕಾರಿ ಕಚೇರಿಗಳಲ್ಲಿ ವಾರದಲ್ಲಿ ಐದು ದಿನ ಕಚೇರಿ ಕಾರ್ಯನಿರ್ವಹಿಸಬೇಕೆಂದು ಸಿಎಂ ಯೋಚನೆ ಮಾಡುತ್ತಿದ್ದಾರೆ. ಏತನ್ಮಧ್ಯೆ ಸಚಿವರೊಬ್ಬರು ಸಿಎಂಗೆ ಪತ್ರ ಬರೆದು ಸಲಹೆ ನೀಡಿದ್ದಾರೆ.
ರಾಜ್ಯ ಸರ್ಕಾರಿ ಕಚೇರಿಗಳಲ್ಲಿ 5 ದಿನ ಕೆಲಸ ಜಾರಿ ಬಗ್ಗೆ ಸಿಎಂಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಹೇಗೆ ಹೆಚ್ಚು ಬಳಸಬಹುದು ಅಂತ ಸಿಎಂಗೆ ಪತ್ರಬರೆದಿರುವ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.
5 ದಿನಗಳಲ್ಲಿ ನಾಲ್ಕು ಗಂಟೆ ಮಾತ್ರ ಕೆಲಸ ಮಾಡಿಸಿ ಅಂತಾ ನಾನು ಪತ್ರ ಬರೆದಿಲ್ಲ ಎಂದು ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 10.30ಕ್ಕೆ ರಿಪೋರ್ಟಿಂಗ್ ಟೈಮ್ ಇದೆ. ಬೆಳಗ್ಗೆ 9.30ರಿಂದ 6 ಗಂಟೆಯವರೆಗೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಲಿ. ಸಾಕಷ್ಟು ಮಹನೀಯರ ಜಯಂತಿಗಳಿಗೆ ರಜೆ ಘೋಷಿಸಿದ್ದೇವೆ. ಮಾನವ ಸಂಪನ್ಮೂಲ ಇದರಲ್ಲೇ ತೊಡಗಿದೆ ಏನೋ ಅಂತಾ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.
ಕಾಯಕವೇ ಕೈಲಾಸ ಎಂದ ಬಸವಣ್ಣರ ಜಯಂತಿ ದಿನವೇ ರಜೆ ತೆಗೆದುಕೊಳ್ತೇವೆ. ಡಾ.ಬಿ.ಆರ್.ಅಂಬೇಡ್ಕರ್ ಅವರೇನೂ ರಜೆ ತೆಗೆದುಕೊಂಡು ನಮಗೆ ಸಂವಿಧಾನ ಕೊಟ್ಟಿಲ್ಲ. ಎಲ್ಲ ಮಹನೀಯರು ಶ್ರಮಪಟ್ಟಿದ್ದಾರೆ, ಅದೇ ರೀತಿ ನಾವು ಕಷ್ಟ ಪಡೋಣ. ಮಹನೀಯರ ಹೆಸರಲ್ಲಿ ರಜೆ ತೆಗೆದುಕೊಳ್ಳಬಾರದು, ಹೆಚ್ಚು ಕೆಲಸ ಮಾಡಲಿ. ಕೆಲಸದ ವೇಳೆ ಕಡಿಮೆ ಮಾಡಿ ಅಂತಾ ನಾನೇನೂ ಹೇಳಿಲ್ಲ ಎಂದರು.
ಮಾನವ ಸಂಪನ್ಮೂಲ ಸಮರ್ಪಕವಾಗಿ ಬಳಕೆ ಮಾಡಬೇಕೆಂದು ಪತ್ರ ಬರೆಯಲಾಗಿದೆ. ರೆಸ್ಟ್ರಿಕ್ಟೆಡ್ ಹಾಲಿಡೇಸ್ ಮಾಡಲಿ, ವಿವಿಧತೆಯಲ್ಲಿ ಐಕ್ಯತೆ ಇರೋ ದೇಶ ನಮ್ಮದು. ಆಯಾ ಸಮುದಾಯದವರು ತಮಗೆ ಬೇಕಾದ ದಿನ ರಜೆ ತೆಗೆದುಕೊಳ್ಳಲಿ. ರಾಜ್ಯ ಸರ್ಕಾರ ನೇಮಿಸಿದ 6ನೇ ವೇತನ ಆಯೋಗವು ಶಿಫಾರಸು ಮಾಡಿದೆ. ಸರ್ಕಾರಿ ನೌಕರರ ಸಂಘದ ಒತ್ತಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ ಸರ್ಕಾರಿ ನೌಕರರ ಸಂಘದ ಒತ್ತಡದಿಂದ ನಾನು ಸಿಎಂಗೆ ಪತ್ರ ಬರೆದಿಲ್ಲ ಎಂದು ಕಲಬುರಗಿಯಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.