ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗದ ಕಾಂಗ್ರೆಸ್ ಜನಪ್ರತಿನಿಧಿಗಳು ಕಾರಣವೇನು ಗೊತ್ತಾ?
ಬುಧವಾರ, 10 ಅಕ್ಟೋಬರ್ 2018 (13:37 IST)
ಮೈಸೂರು : ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದಿನಿಂದ ಚಾಲನೆ ದೊರೆತಿದ್ದು, ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಇನ್ಫೋಸಿಸ್ ಸಂಸ್ಥಾಪಕಿ ಡಾ. ಸುಧಾ ಮೂರ್ತಿ ಉದ್ಘಾಟಿಸಿದ್ದಾರೆ. ನಾಡಿನಲ್ಲಿ ವೈಭವದಿಂದ ಮಾಡುವ ಈ ಉತ್ಸವವನ್ನು ರಾಜ್ಯ ಸರ್ಕಾರವೇ ಮುಂದೆ ನಿಂತು ಆಚರಿಸಬೇಕು. ಆದರೆ ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ನ ಯಾವ ಜನಪ್ರತಿನಿಧಿಗಳು ಹಾಜರಾಗದೆ, ದೂರವೇ ಉಳಿದಿದ್ದಾರೆ.
ಕಳೆದ ಬಾರಿ ದಸರೆಯನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಅಂದು ಕಾಂಗ್ರೆಸ್ ನಾಯಕರ ದಂಡೇ ಈ ಸಮಾರಂಭದಲ್ಲಿ ಭಾಗವಹಿಸಿತ್ತು. ಆದರೆ ಈ ಬಾರಿ ಯಾವ ಕಾಂಗ್ರೆಸ್ ಜನಪ್ರತಿನಿಧಿಗಳು ಉದ್ಘಾಟನೆ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲಿಲ್ಲ.
ಆದರೆ ನಾಡಹಬ್ಬ ಉದ್ಘಾಟನೆ ಕಾರ್ಯಕ್ರಮ ಇದ್ದರೂ ತಮ್ಮ ಕ್ಷೇತ್ರ ಕೊರಟಗೆರೆಯಲ್ಲಿ ಬೇರೊಂದು ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಅತಿಥಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಲ್ಲದೇ ಸರ್ಕಾರದಲ್ಲಿ ಎರಡನೇ ಸ್ಥಾನದಲ್ಲಿದ್ದರೂ ತಮ್ಮನ್ನ ನಿರ್ಲಕ್ಷಿಸಲಾಗುತ್ತಿದೆ. ಮೈಸೂರು ದಸರಾ ಉತ್ಸವದ ಸಿದ್ದತಾ ಸಭೆಗಳಿಗೂ ತಮ್ಮನ್ನು ಆಹ್ವಾನಿಸಿಲ್ಲ. ಸರ್ಕಾರದ ಮಟ್ಟದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ. ವರ್ಗಾವಣೆ ವಿಚಾರ ಸೇರಿ ಯಾವುದೇ ವಿಚಾರಕ್ಕೂ ತಮ್ಮ ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲ ಎಂಬ ಕಾರಣಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ದಸರಾ ಉದ್ಘಾಟನೆಗೆ ಗೈರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದರೂ ಎರಡೂ ಪಕ್ಷಗಳಲ್ಲಿ ಹೊಂದಾಣಿಕೆ ಇಂದಿಗೂ ಸಾಧ್ಯವಾಗಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.