ಇನ್ಸಪೆಕ್ಟರ್ ಆಗಲು ಹೋದವ ಜೈಲು ಶಿಕ್ಷೆಗೆ ಗುರಿಯಾದದ್ದು ಏಕೆ ಗೊತ್ತಾ?

ಬುಧವಾರ, 12 ಡಿಸೆಂಬರ್ 2018 (18:50 IST)
ಆತ ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಪುರುಷ) ಹುದ್ದೆಯ ನೇಮಕಾತಿಗೆ ಹೋಗಿದ್ದ. ಆದರೆ ಈಗ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಪುರುಷ) ಹುದ್ದೆಯ ನೇಮಕಾತಿಸಂದರ್ಭದಲ್ಲಿ ತನ್ನ ಎತ್ತರವನ್ನು ಹೆಚ್ಚಿಸಿಕೊಳ್ಳಲು ತಲೆ ಕೂದಲುಗಳ ಮಧ್ಯೆ ರಬ್ಬರ್ ಪದಾರ್ಥವನ್ನು ಅಂಟಿಸಿಕೊಂಡು ಆರ್.ಎಸ್.ಐ ಹುದ್ದೆಗೆ ಆಯ್ಕೆಯಾಗಲು ಪ್ರಯತ್ನಿಸಿ ತಪಾಸಣೆ ವೇಳೆ ಸಿಕ್ಕಿಬಿದ್ದ ಆರೋಪಿ ಶಶಿಧರಯ್ಯ ತಂದೆ ಮುದ್ದಯ್ಯ ವಸ್ತ್ರದ ಎಂಬಾತನನ್ನು 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 3000 ರೂ. ದಂಡ ವಿಧಿಸಿ ಕಲಬುರಗಿ ಪ್ರಧಾನ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅರವಿಂದ ಎನ್.ವಿ. ಅವರು   ತೀರ್ಪು ನೀಡಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯಡಲದೊಡ್ಡಿ ಅಂಚೆಯ ತಿಮ್ಮಾಪುರ ಗ್ರಾಮದ ನಿವಾಸಿಯಾಗಿರುವ ಶಶಿಧರಯ್ಯ ತಂದೆ ಮುದ್ದಯ್ಯ ವಸ್ತ್ರದ ಈತ 2016ರ ಫೆಬ್ರವರಿ 4 ರಂದು ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಕಲಬುರಗಿ ಡಿ.ಎ.ಆರ್. ಕೇಂದ್ರಸ್ಥಾನದಲ್ಲಿ ಜರುಗಿದ ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಪುರುಷ) ಹುದ್ದೆಯ ನೇಮಕಾತಿ ಸಂದರ್ಭದಲ್ಲಿ ತನ್ನ ಎತ್ತರ ಕಡಿಮೆ ಇರುವುದರಿಂದ ಎತ್ತರ ಹೆಚ್ಚಿಸಿಕೊಳ್ಳಲು ತಲೆಯ ಕೂದಲುಗಳ ಮಧ್ಯೆ ರಬ್ಬರ್ ಪದಾರ್ಥವನ್ನು ಅಂಟಿಸಿಕೊಂಡು ಮೋಸದಿಂದ ಆರ್.ಎಸ್.ಐ ಹುದ್ದೆಗೆ ಆಯ್ಕೆಯಾಗಲು ಬಂದಿದ್ದ. ಆಗ ಬಿ.ಎಂ.ಐ ಯಂತ್ರದ ತಪಾಸಣೆ ವೇಳೆ ಸಿಕ್ಕಿಬಿದ್ದ ಕಾರಣ ಅವರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿ ಎ.ಎಸ್.ಐ ಶಶಿಕಾಂತ ಅವರು ತನಿಖೆ ಮಾಡಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ಕಲಬುರಗಿ ಪ್ರಧಾನ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಎನ್.ವಿ. ಅವರು ವಾದ ಪ್ರತಿವಾದವನ್ನು ಕೂಲಂಕುಷವಾಗಿ ಆಲಿಸಿ ಆರೋಪಿತ ಎಸಗಿರುವ ಅಪರಾಧಕ್ಕಾಗಿ ಐ.ಪಿ.ಸಿ. 417ರನ್ವಯ 6 ತಿಂಗಳ ಸಾದಾ ಕಾರಾಗೃವಾಸ ಶಿಕ್ಷೆ ಹಾಗೂ 3000 ರೂ. ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಾಯ್.ಜಿ.ತುಂಗಳ  ವಾದ ಮಂಡಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ