ಮುಡಾ ನಿವೇಶನ ಹಂಚಿಕೆ ಪ್ರಕರಣ ಸಿಬಿಐಗೆ ನೀಡುವ ಬಗ್ಗೆ ಸಿಎಂ ಏನಂದ್ರು ಗೊತ್ತಾ

Sampriya

ಬುಧವಾರ, 3 ಜುಲೈ 2024 (18:54 IST)
ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ  ದುರುಪಯೋಗ ಆಗಿದೆಯೋ ಇಲ್ಲವೋ ಎಂದು ಪತ್ತೆ ಹಚ್ಚಲು ತನಿಖೆ ಮಾಡಲಾಗುತ್ತಿದ್ದು ಎಲ್ಲಾ ನಿವೇಶನಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಹಾಗಾಗಿ  ಸರ್ಕಾರಕ್ಕೆ ನಷ್ಟವಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡಿದ್ದವರನ್ನು ವರ್ಗಾವಣೆ ಮಾಡಿ ಹಿರಿಯ ಐಎಎಸ್ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುತ್ತಿದೆ. ವರದಿ ಬಂದ ನಂತರ  ಈ ಬಗ್ಗೆ  ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.

ಮುಡಾ  ನಿವೇಶನ ಹಂಚಿಕೆಯಲ್ಲಿ ದುರುಪಯೋಗವಾಗಿದೆ ಎಂದು ಬಿಜೆಪಿ ಆರೋಪ ಮಾಡಿದ್ದು ಸಿಬಿಐ ಗೆ ಪ್ರಕರಣ ಹಸ್ತಾಂತರ ಮಾಡಲು ಒತ್ತಾಯಿಸಿರುವ ಬಗ್ಗೆ ಮಾತನಾಡಿ ಎಲ್ಲವನ್ನೂ ಸಿಬಿಐ ಗೆ
ಹಸ್ತಾಂತರಿಸಲು ಏಕೆ ಹೇಳುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐಗೆ  ಹಸ್ತಾಂತರ ಮಾಡಿದ್ದರು  ಎಂದು ಪ್ರಶ್ನಿಸಿದರು. ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ನಿವೇಶನ ನೀಡಬೇಕೆಂದು ಬಿಜೆಪಿಯೇ ಕಾನೂನು ಮಾಡಿದೆ ಎಂದರು.

ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ
ವಿರೋಧ ಪಕ್ಷದ ನಾಯಕ  ಆರ್.ಅಶೋಕ್ ಅವರು ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಕರಣದಲ್ಲಿ ನನ್ನ ಪಾತ್ರವೇನಿದೆ ಎಂದು ಪ್ರಶ್ನಿಸಿದರು. ಆರ್. ಅಶೋಕ್ ಕರ್ತವ್ಯ ಲೋಪವೆಸಗಿದ್ದಾರೆ ಎಂದರೆ ರಾಜಿನಾಮೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು. ಅವರ ಕಾಲದಲ್ಲಿ ಅಕ್ರಮ ಸಕ್ರಮ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂದು ಆರೋಪ ಕೇಳಿ ಬಂದಾಗ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಅದಕ್ಕೆ ರಾಜಿನಾಮೆ ಕೊಡಿ ಅಂದರೆ ಕೊಡುತ್ತಾರೆಯೇ ಎಂದರು.

ವಾಲ್ಮೀಕಿ ನಿಗಮದ ಅಕ್ರಮಗಳ ಬಗ್ಗೆ ತನಿಖೆ
ಬಿಜೆಪಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಅಕ್ರಮಗಳ ಬಗ್ಗೆಯೂ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾತನಾಡಿ ವಾಲ್ಮೀಕಿ ನಿಗಮದ ಪ್ರಕರಣವನ್ನು ಎಸ್‍ಐಟಿ ಗೆ ವಹಿಸಲಾಗಿದ್ದು ತನಿಖೆ ನಡೆಯುತ್ತಿದೆ.  ಸಚಿವರಾಗಿದ್ದ ನಾಗೇಂದ್ರ ಅವರಿಂದ ರಾಜಿನಾಮೆ ಪಡೆಯಲಾಗಿದೆ. ಡೆತ್ ನೋಟಿನಲ್ಲಿ ಮಂತ್ರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ಮೌಖಿಕ ಆದೇಶ ನೀಡಿದ್ದರು ಎಂದು ಬರೆದಿರುವ ಕಾರಣ ರಾಜಿನಾಮೆ ಪಡೆದೆವು.  ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ಕೈಗೊಂಡಿದೆ ಎಂದರು.

ಶರಣು ಪ್ರಕಾಶ್ ಪಾಟೀಲ್ ಅವರಿಗೂ ಪಾಲು ಹೋಗಿದೆ ಎಂಬ ಆರೋಪ ಮಾಡಿರುವ ಬಗ್ಗೆ ಮಾತನಾಡಿ ಅದಕ್ಕಾಗಿಯೇ ಎಸ್‍ಐಟಿ ರಚನೆಯಾಗಿದೆ. ತನಿಖೆಯ ವರದಿ ಬರಬೇಕು. ಅವರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಬೇಕು. ಇದ್ಯಾವುದೂ ಇಲ್ಲದೇ ಕ್ರಮ ಕೈಗೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ