ಬೆಂಗಳೂರು: ಮುಡಾ ಸೈಟು ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಜನ ನಾನಾ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಹೆಸರಿನಲ್ಲಿ ನಿಯಮಬಾಹಿರವಾಗಿ ಸೈಟು ವರ್ಗಾವಣೆಯಾಗಿದೆ ಎಂದು ಆರೋಪ ಕೇಳಿಬಂದಿತ್ತು. ಇದರ ವಿರುದ್ಧ ವಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಇದು ಬಿಜೆಪಿ ಕಾಲದಲ್ಲೇ ಆಗಿದ್ದು. ನನ್ನ ಬಾಮೈದುನನ ಹೆಸರಿನಲ್ಲಿದ್ದ ಜಾಗವನ್ನು ಆತ ನನ್ನ ಹೆಂಡತಿಗೆ ಅರಶಿನ ಕುಂಕುಮ ರೂಪದಲ್ಲಿ 1 ಎಕರೆಯಷ್ಟು ದಾನ ಮಾಡಿದ್ದ ಎಂದಿದ್ದರು.
ಇದರ ಬಗ್ಗೆ ಈಗ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನಮಗೆಲ್ಲಾ ಅರಶಿನ ಕುಂಕುಮ ಎಂದರೆ ಐವತ್ತೋ ನೂರೋ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಆದರೆ ನಿಮಗೆ ಬಿಡಿ, ಅರಶಿನ ಕುಂಕುಮ ಎಂದು ಸೈಟ್ ನ್ನೇ ಕೊಡುತ್ತಾರೆ. ನಿಮ್ಮ ಲೆವೆಲ್ಲೇ ಬೇರೆ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಮತ್ತೆ ಕೆಲವರು ಇದು ಜಸ್ಟ್ ಅರಶಿನ ಕುಂಕುಮವಷ್ಟೇ. ದಯವಿಟ್ಟು ಯಾರೂ ಸಿಎಂ ಪ್ರಶ್ನೆ ಮಾಡ್ಬೇಡಿ ಎಂದು ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ.
ವಾಲ್ಮೀಕಿ ಹಗರಣದ ಬಳಿಕ ಮುಡಾ ಹಗರಣ ರಾಜ್ಯ ಬಿಜೆಪಿಗೆ ದೊಡ್ಡ ಅಸ್ತ್ರವಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ಅವರ ಕುಟುಂಬದವರ ಹೆಸರೂ ಕೇಳಿಬಂದಿದೆ. 4000 ಕೋಟಿ ರೂ. ಮೌಲ್ಯದ ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.