37 ವರ್ಷದ ಸಾವಿತ್ರಿ (Savithri) ಹಾಗೂ 60 ವರ್ಷ ವಯಸ್ಸಿನ ಸರೋಜಮ್ಮ(Sarojamma) ಮೃತರಾದವರು. ಸಾವಿತ್ರಿಯ ಪತಿ 47 ವರ್ಷದ ರವಿಕುಮಾರ್ (Ravikumar) ಅವರನ್ನು ಈಗಾಗಲೇ ಬಂಧನ ಮಾಡಲಾಗಿದೆ ಎಂದು ಗೋವಿಂದರಾಜನಗರ ಪೊಲೀಸರು ತಿಳಿಸಿದ್ದಾರೆ. ತೀರ್ಥಹಳ್ಳಿ ಮೂಲದ ದಂಪತಿಗಳು ಕಳೆದ 18 ವರ್ಷದ ಹಿಂದೆ ವಿವಾಹವಾಗಿದ್ದರು. ಆರು ತಿಂಗಳ ಹಿಂದೆಯಷ್ಟೇ ಮೂಡಲಪಾಳ್ಯಕ್ಕೆ ಬಂದು ಇಲ್ಲಿ ವಾಸವಾಗಿದ್ದರು. ಈ ಹಿಂದೆ ಎಳನೀರು ವ್ಯಾಪಾರ ಮಾಡುತ್ತದ್ದ ಆರೋಪಿ ರವಿಕುಮಾರ್, ಮೂಡಲಪಾಳ್ಯಕ್ಕೆ ಬಂದ ಬಳಿಕ ಬೇಕರಿಯೊಂದನ್ನು ಆರಂಭಿಸಿ ಅದರ ವ್ಯವಹಾರದಲ್ಲಿ ನಿರತರಾಗಿದ್ದರು.
ಹೆಂಡತಿಯ ಅನೈತಿಕ ಸಂಬಂಧ ಪ್ರಶ್ನಿಸಿ ಪ್ರತಿ ಬಾರಿ ರವಿಕುಮಾರ್ ಗಲಾಟೆ ಮಾಡುತ್ತಿದ್ದರು. ಇಷ್ಟಾದ್ರೂ ಕೂಡ ಹಳೆ ಚಾಳಿಯನ್ನ ಬಿಡಲು ಪತ್ನಿ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ರವಿಕುಮಾರ್ ಕೊಲೆ ಮಾಡಲು ಮುಂದಾಗಿದ್ದರು. ಮಕ್ಕಳನ್ನ ಕಾಲೇಜಿಗೆ ಬಿಟ್ಟು ವಾಪಸ್ ಮನೆಗೆ ಬಂದಿದ್ದ ರವಿ, ಬರುತ್ತಿದ್ದಂತೆ ಎಳನೀರು ಕತ್ತರಿಸುವ ಮಚ್ಚಿನಿಂದ ಸಾವಿತ್ರಿಯನ್ನು ಕೊಲೆ ಮಾಡಿದ್ದಾರೆ. ಈ ವೇಳೆ ಅಡ್ಡ ಬಂದಿದ್ದ ಅತ್ತೆ ಸರೋಜಮ್ಮನನ್ನು ಕೊಲೆ ಮಾಡಿದ್ದಾರೆ. ಗೋವಿಂದರಾಜನಗರ ಪೊಲೀಸರ ವಿಚಾರಣೆ ವೇಳೆ ರವಿಕುಮಾರ್ ಇದೆಲ್ಲವನ್ನು ಬಾಯ್ಬಿಟ್ಟಿದ್ದಾನೆ. ಸಾವಿತ್ರಿಗೆ ಸರೋಜಮ್ಮ ಕೂಡ ಸಹಾಯ ಮಾಡುತ್ತಿದ್ದರು. ಈ ಕಾರಣದಿಂದ ಅತ್ತೆಯನ್ನೂ ಕೊಲೆ ಮಾಡಿದ್ದಾಗಿ ಆರೋಪಿ ರವಿಕುಮಾರ್ ಹೇಳಿದ್ದಾರೆ.