ಸೊಸೆ, ಮೊಮ್ಮಗ ಜೈಲಿನಲ್ಲೇ ಸಾಯ್ಲಿ : ಭಾಸ್ಕರ್ ಶೆಟ್ಟಿ ತಾಯಿ
ಶನಿವಾರ, 5 ನವೆಂಬರ್ 2016 (16:24 IST)
ತಮ್ಮ ಮಗನ ಹತ್ಯೆ ಖಚಿತವಾಗಿರುವ ಹಿನ್ನೆಲೆಯಲ್ಲಿ ಭಾಸ್ಕರ ಶೆಟ್ಟಿ ತಾಯಿ, ಮಗನನ್ನು ಅಮಾನುಷವಾಗಿ ಕೊಂದಿರುವ ಸೊಸೆ ಮತ್ತು ಮೊಮ್ಮಗ ಜೈಲಿನಲ್ಲಿಯೇ ಸಾಯಬೇಕು ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತ, ಸೊಸೆ ರಾಜೇಶ್ವರಿ ಶೆಟ್ಟಿ, ಮೊಮ್ಮಗ ನವನೀತ ಶೆಟ್ಟಿ ವಿರುದ್ಧ ಕಿಡಿಕಾರಿರುವ ಗುಲಾಬಿ ಶೆಟ್ಟಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಭೂಮಿಯ ಮೇಲೆ ಅವರು ಇರಲೇ ಬಾರದು ಎಂದು ಕಟುವಾಗಿ ನುಡಿದಿದ್ದಾರೆ.
ಆಕೆಯನ್ನು ಕಟ್ಟಿಕೊಂಡ ಬಳಿಕ ಮಗ ಒಂದು ದಿನವೂ ಸಮಾಧಾನದಿಂದ ಇರಲಿಲ್ಲ. ದುಂಬೈನಿಂದ ಊರಿಗೆ ಬಂದಾಗ ಪ್ರತಿದಿನ ಜಗಳವಾಗುತ್ತಿತ್ತು. ಪತಿ ಗಳಿಸಿದ್ದ ಹಣವನ್ನೆಲ್ಲ ಆಕೆ ನಿರಂಜನ್ ಭಟ್ಟನಿಗೆ ಸುರಿದಿದ್ದಾಳೆ. ಅವರೆಲ್ಲ ಜೈಲಿನಲ್ಲಿಯೇ ಕೊಳೆಯಬೇಕು ಎಂದಿದ್ದಾರೆ ಗುಲಾಬಿ ಶೆಟ್ಟಿ.
ಉದ್ಯಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಬುಧವಾರ ಐದು ಆರೋಪಿಗಳ ವಿರುದ್ಧ ಪ್ರಧಾನ ಹೆಚ್ಚುವರಿ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. 1,300 ಪುಟಗಳ ದೋಷಾರೋಪಣಾ ಪಟ್ಟಿಯಲ್ಲಿ 80ಕ್ಕೂ ಹೆಚ್ಚು ಮಂದಿ ಹೇಳಿಕೆಗಳಿವೆ. 100ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಿಐಡಿ ಪೊಲೀಸರು ಸಂಗ್ರಹಿಸಿದ್ದಾರೆ.
ಮೃತರ ಪತ್ನಿ ರಾಜೇಶ್ವರಿ ಶೆಟ್ಟಿ(50) ಪುತ್ರ ನವನೀತ್ ಶೆಟ್ಟಿ(20), ಶ್ರೀನಿವಾಸ್ ಭಟ್ (26), ರಾಘವೇಂದ್ರ (26) ಪುರೋಹಿತ ನಿರಂಜನ್ ಭಟ್(26), ಹೆಸರು ಆರೋಪ ಪಟ್ಟಿಯಲ್ಲಿದೆ.
ಪಳ್ಳಿ ಸೇತುವೆ ಸಮೀಪ ವಶಪಡಿಸಿಕೊಂಡಿದ್ದ ಮೂಳೆಗಳು ಭಾಸ್ಕರ ಶೆಟ್ಟಿ ಅವರದೇ ಎಂಬುದು ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾಗಿದೆ. ಅದರ ಬಳಿಕ ಕುಟುಂಬದ ಸದಸ್ಯರು ಶೆಟ್ಟಿಯವರ ಅಂತಿಮ ವಿಧಿವಿಧಾನಗಳನ್ನು ಪ್ರಾರಂಭಿಸಿಕೊಂಡಿದ್ದಾರೆ.
ಜುಲೈ 28 ರಂದು ಭಾಸ್ಕರ್ ಶೆಟ್ಟಿ ಅವರ ಕೊಲೆ ನಡೆದಿತ್ತು. ಈ ಪ್ರಕರಣ ರಾಜ್ಯಾದ್ಯಂತ ಸಂಚಲವನ್ನು ಸೃಷ್ಟಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ