ಡಾ.ಅಂಬೇಡ್ಕರ್ ಕ್ರೀಡಾಂಗಣ ನಿರ್ಮಾಣದ ಹೆಸರಲ್ಲಿ ಕೊಳ್ಳೆ ಹೊಡೆದ ಜಗದೀಶ್ ಶೆಟ್ಟರ್, ಪ್ರಲ್ಹಾದ ಜೋಶಿ: ಆರೋಪ

ಮಂಗಳವಾರ, 27 ನವೆಂಬರ್ 2018 (17:16 IST)
ಹೆಗ್ಗೇರಿಯ ಕೆರೆಯನ್ನು ಒತ್ತುವರಿ ತೆರವುಗೊಳಿಸದೆ, ಸೂಕ್ತ ಯೋಜನಾ ವರದಿ ತಯಾರಿಸದೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕ್ರೀಡಾಂಗಣ ಕೆಲಸ ಆರಂಭಿಸಲಾಗಿದೆ. ಕೆರೆಯ ಜಾಗೆ ಹಾಗೂ ಪಾಲಿಕೆ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಇದರಲ್ಲಿ ಸ್ಥಳೀಯ ಶಾಸಕ ಮತ್ತು ಸಂಸದರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕ್ರೀಡಾಂಗಣ ಕೆಲಸದಲ್ಲಿ ಶಾಸಕ ಜಗದೀಶ ಶೆಟ್ಟರ್ ಹಾಗೂ ಸಂಸದ ಜೋಶಿಯವರ ಕೈವಾಡವಿದೆ ಎಂದು ಸಮತಾ ಸೇನಾ ಕರ್ನಾಟಕದ ಗುರುನಾಥ ಉಳ್ಳಿಕಾಶಿ ಆರೋಪಿಸಿದರು.

ಹುಬ್ಬಳ್ಳಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಗ್ಗೇರಿಯು ನೀರಿನ ಮೂಲವಿಲ್ಲದೇ ಕೊಳಚೆ ಗುಂಡಿಯಾದ ಕಾರಣ ಸಾರ್ವಜನಿಕರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು. ಸಂಘಟನೆಗಳ ಆಗ್ರಹಕ್ಕೆ ಮಣಿದು ಮಹಾನಗರ ಪಾಲಿಕೆ ಒಪ್ಪಿಗೆ ನೀಡಿತ್ತು.  ಆದರೆ  2014 ರಿಂದ 2015 ರ ವರೆಗೆ ಸರ್ವೆ ಆರಂಭಿಸಿ ಕೆರೆಯ 1ಎಕರೆ 11ಗುಂಟೆ ಜಾಗೆಯನ್ನು ಅತಿಕ್ರಮಣ ತೆರವುಗೊಳಿಸುವಲ್ಲಿ ವಿಫಲವಾಗಿದೆ. ಅಲ್ಲದೆ ಸರ್ಕಾರದ 100 ಕೋಟಿ,  ಮಹಾನಗರ  ಪಾಲಿಕೆಯಿಂದ 1 ಕೋಟಿ ಅನುದಾನ ಜಾರಿಯಾಗಿದ್ದರೂ ಕೂಡ ಅತಿಕ್ರಮಣ ತೆರವುಗೊಳಿಸುವಲ್ಲಿ ವಿಫಲವಾಗಿದೆ. ಅಷ್ಟೇ ಅಲ್ಲದೇ ಗುರಿಯಿಲ್ಲದೆ ಹುಚ್ಚರಂತೆ ಕಾಮಗಾರಿ ಆರಂಭಿಸಿದ್ದಾರೆ ಎಂದು ಅವರು ಪಾಲಿಕೆ ಹಾಗೂ ಸ್ಥಳೀಯ ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.

ಸರ್ವೋಚ್ಚ ನ್ಯಾಯಲಯ ಕೆರೆ ಒತ್ತುವರಿ ತೆರವುಗೊಳಿಸಲು ಆದೇಶಿಸಿದ್ದರೂ ಕೂಡ ಮಹಾನಗರ ಪಾಲಿಕೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುತ್ತಿರುವುದು ಖಂಡನೀಯವಾಗಿದೆ. ಇದರ ಹಿಂದೆ ಉಳ್ಳವರ ಕೈವಾಡ ಇರುವುದು ಕಂಡುಬರುತ್ತದೆ ಎಂದರು. ಅಲ್ಲದೇ ಪರ್ಸೆಂಟೆಜ್ ಮೂಲಕ ಕಾಮಗಾರಿಗಳಿಗೆ ಚಾಲನೇ ನೀಡುತ್ತಿರುವುದು ಸರಿಯಲ್ಲ. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕ್ರೀಡಾಂಗಣ ನಿರ್ಮಾಣದಲ್ಲಿ ಹಿನ್ನಡೆ ಉಂಟಾಗಲು ಶಾಸಕ ಜಗದೀಶ ಶೆಟ್ಟರ್ ಹಾಗೂ ಸಂಸದ ಜೋಶಿಯವರೇ ಮೂಲ ಕಾರಣ ಎಂದು ಅವರು ಗಂಭೀರವಾಗಿ ಆರೋಪಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ