ಧರ್ಮಸ್ಥಳದ ವಿಷಯದಲ್ಲಿ ಹಿನ್ನೆಲೆಯ ವ್ಯಕ್ತಿಗಳ ತನಿಖೆ: ಡಾ.ಸಿ.ಎನ್.ಅಶ್ವತ್ಥನಾರಾಯಣ್ ಒತ್ತಾಯ

Krishnaveni K

ಶುಕ್ರವಾರ, 15 ಆಗಸ್ಟ್ 2025 (16:30 IST)
ಬೆಂಗಳೂರು: ಉಪ ಮುಖ್ಯಮಂತ್ರಿಯವರು ನಿಜಕ್ಕೂ ಮಂಜುನಾಥೇಶ್ವರನನ್ನು ನಂಬಿದ್ದರೆ, ಶ್ರೀಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಹಿನ್ನೆಲೆಯಲ್ಲಿರುವ ವ್ಯಕ್ತಿಗಳ ತನಿಖೆ ಮಾಡಿ ಬಯಲಿಗೆಳೆಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಒತ್ತಾಯಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಜನರ ತಾಳ್ಮೆ, ಸಹನೆಯನ್ನು ಪರೀಕ್ಷೆ ಮಾಡುತ್ತಿದ್ದೀರಾ? ಸರಕಾರ ಬದುಕಿದೆಯೇ ಇಲ್ಲವೇ ಎಂದು ಗೊತ್ತಾಗಬೇಕಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ ಬದುಕಿದ್ದರೆ ತೋರಿಸಲಿ. ಯಾರಾದರೂ ತನಿಖೆಗೆ ಅಡಚಣೆ ಮಾಡಿದ್ದಾರಾ? ತನಿಖೆಯನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಅನಾಮಿಕ ವ್ಯಕ್ತಿಯ ಕುರಿತಂತೆಯೂ ತನಿಖೆ ಆಗಬೇಕು ಎಂದು ಕೋರಿದರು. 

ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಸಂದರ್ಭದಲ್ಲಿ ನೀವು ಅದನ್ನು ಸಮರ್ಥನೆ ಮಾಡಿದ್ದೀರಿ. ಪೊಲೀಸ್ ಠಾಣೆಗೆ ಬೆಂಕಿ, ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಜೀಪಿಗೆ ಬೆಂಕಿ, ಶಾಸಕರ ಮನೆಗೆ ಬೆಂಕಿ ಇಟ್ಟದ್ದನ್ನು ಸಮರ್ಥಿಸಿದ್ದೀರಿ ತಾನೇ ಎಂದು ಅವರು ಪ್ರಶ್ನಿಸಿದರು.

ಧರ್ಮಸ್ಥಳದಲ್ಲಿ ಇಂಥ ಘಟನೆ ನಡೆದಿದೆಯೇ? ಯೂ ಟ್ಯೂಬರ್‍ಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಸಾಮಾಜಿಕ ಜಾಲತಾಣದಲ್ಲಿ ಇವರೇ ತನಿಖೆ ನಡೆಸಿ ಇವರೇ ತೀರ್ಪು ಕೊಡುತ್ತಾರೆ. ಇದರಿಂದ ಹಿಂದೂ ಸಮಾಜ- ಶ್ರೀ ಮಂಜುನಾಥೇಶ್ವರನನ್ನು ನಂಬುವ ಭಕ್ತರಿಗೆ ಬಹಳಷ್ಟು ನೋವಾಗಿದೆ ಎಂದು ತಿಳಿಸಿದರು. ಧರ್ಮಾಧಿಕಾರಿಗಳ ಮೇಲೂ ಆಪಾದನೆ ಮಾಡಿದ್ದನ್ನು ಆಕ್ಷೇಪಿಸಿದರು.

ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಯಾರೋ ಒಬ್ಬ ವ್ಯಕ್ತಿ ಒಂದು ಪೋಸ್ಟ್ ಹಾಕಿದ್ದಕ್ಕೆ ಪೊಲೀಸ್ ಠಾಣೆಗೇ ಬೆಂಕಿ ಹಾಕಿದ್ದರು. ಶಾಸಕನ ಮನೆಯನ್ನೇ ಸುಟ್ಟು ಹಾಕಿದ್ದರು. ಪೊಲೀಸರ ವಾಹನ ಸುಟ್ಟು, ಪೊಲೀಸರ ಮೇಲೆ ಹಲ್ಲೆ ಮಾಡಲಾಗಿತ್ತು. ಆಗ ಇದೇ ಕಾಂಗ್ರೆಸ್ ಪಕ್ಷ ಅದನ್ನು ಸಮರ್ಥಿಸಿಕೊಂಡಿತ್ತು ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುತ್ತಾರೆ. ಧರ್ಮಸ್ಥಳ, ಧರ್ಮಾಧಿಕಾರಿಗಳ ವಿಷಯದಲ್ಲಿ ಬೇರೆ ಬೇರೆ ಪೋಸ್ಟ್ ಹಾಕಿದಾಗ ಇದೇ ಗೃಹ ಇಲಾಖೆ ಯಾಕೆ ಕಾನೂನು ಕ್ರಮ, ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ