ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಹೃದಯ ತಜ್ಞ ಡಾ. ಸಿಎನ್ ಮಂಜುನಾಥ್ ಪರವಾಗಿ ಅವರ ಪತ್ನಿ ಅನಸೂಯಾ ಎದುರಾಳಿಗಳಿಗೆ ಖಡಕ್ ಟಾಂಗ್ ಕೊಟ್ಟಿದ್ದಾರೆ.
ಅನಸೂಯಾ ಮಂಜುನಾಥ್ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಮಗಳು. ಹೀಗಾಗಿ ರಾಜಕಾರಣ ಅವರ ರಕ್ತದಲ್ಲೇ ಇದೆ. ಇದೀಗ ಗಂಡನ ಪರವಾಗಿ ಪ್ರಚಾರಕ್ಕೆ ನಿಂತಿರುವ ಅನಸೂಯಾ ಮಂಜುನಾಥ್ ಎದುರಾಳಿ ಪಕ್ಷ ಕಾಂಗ್ರೆಸ್ ಗೆ ಸಖತ್ ಕೌಂಟರ್ ಕೊಟ್ಟಿದ್ದಾರೆ.
ಡಾ ಮಂಜುನಾಥ್ ಗೆ ಎದುರಾಳಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಡಿಕೆ ಸುರೇಶ್ ಸ್ಪರ್ಧಿಸುತ್ತಿದ್ದಾರೆ. ಅವರು ಈಗಾಗಲೇ ಈ ಕ್ಷೇತ್ರದ ಸಂಸದ. ಹೀಗಾಗಿ ಇಲ್ಲಿ ಗೆಲ್ಲುವುದು ಅವರಿಗೆ ಪ್ರತಿಷ್ಠೆಯ ವಿಚಾರವಾಗಿದೆ. ಆದರೆ ಮಂಜುನಾಥ್ ರಂತಹ ಕಳಂಕರಹಿತ, ಜನಪ್ರಿಯ ವ್ಯಕ್ತಿ ಸ್ಪರ್ಧಿಸುತ್ತಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆ. ಈ ಕಾರಣಕ್ಕೆ ಮಾತಿನ ಚಕಮಕಿಗಳು ಜೋರಾಗಿಯೇ ನಡೆಯುತ್ತಿದೆ.
ಇದೀಗ ಗಂಡನ ಪರವಾಗಿ ಮಾತನಾಡಿರುವ ಅನಸೂಯಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾರರು ಕೈ ಹಿಡಿಯುತ್ತಾರೆ ಎಂದು ಗೊತ್ತಿದ್ದೇ ಅಮಿತ್ ಶಾ ಅವರು ನನ್ನ ಗಂಡನಿಗೆ ಟಿಕೆಟ್ ನೀಡಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ವಿಭಿನ್ನವಾದ ವಾತಾವರಣವಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳು ಹೋರಾಡುತ್ತಿವೆ. ಬಿಜೆಪಿಯಿಂದ ಅಮಿತ್ ಶಾ ಇದ್ದರೆ ಜೆಡಿಎಸ್ ನಿಂದ ಕುಮಾರಣ್ಣ ಇದ್ದಾರೆ. ಹಿರಿಯರಾದ ದೇವೇಗೌಡರ ಸಾಧನೆ ಇದೆ. ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್ ಸಹಾಯ ಸಿಕ್ಕಿತ್ತು ಎನ್ನುವುದನ್ನು ಅವರು ಮರೆಯಬಾರದು ಎಂದಿದ್ದಾರೆ.