ಬರ ಅಧ್ಯಯನ ಪ್ರವಾಸ: ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಕಿಡಿ

ಭಾನುವಾರ, 25 ಡಿಸೆಂಬರ್ 2016 (18:03 IST)
ಸಿಎಂ ಸಿದ್ದರಾಮಯ್ಯ ಅವರು ಬರ ಅಧ್ಯಯನ ಪ್ರವಾಸ ನಡೆಸಿದ್ದರು. ಆದರೆ, ರೈತರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಇದೀಗ ಅವರ ಸಚಿವ ಸಂಪುಟದ ಉಪಸಮಿತಿ ಸದಸ್ಯರು ರಾಜ್ಯದೆಲ್ಲಡೆ 4 ತಂಡ ಮಾಡಿಕೊಂಡು ರಾಜ್ಯದೆಲ್ಲೆಡೆ ಬರ ಅಧ್ಯಯನ ನಡೆಸುತ್ತಿರುವುದು ಯಾವ ಪುರಷಾರ್ಥಕ್ಕಾಗಿ ಎಂಬುದೇ ತಿಳಿಯುತ್ತಿಲ್ಲ ಎಂದು ಜೆಡಿಎಸ್ ಶಾಸಕ ಕೋನರೆಡ್ಡಿ ಟೀಕಿಸಿದ್ದಾರೆ. 
 
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಕೇಂದ್ರದಲ್ಲಿರು ಬಿಜೆಪಿ ಸರಕಾರವಾಗಲಿ, ರಾಜ್ಯದಲ್ಲಿರುವ ಕಾಂಗ್ರಸ್ ಸರಕಾರವಾಗಲಿ ರೈತರ ಕಣ್ಣೀರು ಒರೆಸುವ ಬದಲಿಗೆ ಇನ್ನಷ್ಟು ಕಣ್ಣೀರು ಹರಿಸುವಂತೆ ಮಾಡುತ್ತಿವೆ ಎಂದು ಕಿಡಿಕಾರಿದರು, 
 
ಬಿಜೆಪಿ ನಾಯಕರು ರಾಜ್ಯದಲ್ಲಿ ಬರ ಅಧ್ಯಯನ ನಡೆಸುತ್ತಿರುವುದು ಕಾಂಗ್ರೆಸ್‌ನೊಂದಿಗೆ ಪೈಪೋಟಿ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದ್ದು, ಸಂಕಷ್ಟದಲ್ಲಿರುವ ರೈತನ ನೆರವಿಗೆ ಧಾವಿಸಬೇಕಿರುವ ಎರಡು ರಾಷ್ಟ್ರೀಯ ಪಕ್ಷಗಳು ರೈತರ ಸಾಲ ಮನ್ನಾ ವಿಷಯದಲ್ಲಿ ಚಕಾರ ಎತ್ತದಿರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. 
 
ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ ಪ್ರಚಾರ ತೆಗೆದುಕೊಳ್ಳುತ್ತಿರುವ ಬಿಜೆಪಿ ನಾಯಕರಿಗೆ ತಾಕತ್ತಿದ್ದರೆ ತಮ್ಮ ನಾಯಕರ ಮನವೊಲಿಸಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನುದಾನ ತರಲಿ ಎಂದು ಜೆಡಿಎಸ್ ಶಾಸಕ ಕೋನರೆಡ್ಡಿ ಸವಾಲ್ ಎಸೆದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ