ಬೆಂಗಳೂರು: ಮಲೇರಿಯಾ, ಚಿಕನ್ ಗುನ್ಯಾ, ಡೆಂಘಿ, ಹೆಚ್1-ಎನ್1 ಸೇರಿದಂತೆ ರಾಜ್ಯದ ಹಲವೆಡೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ರೋಗದ ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಗಿದೆ.
ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರಿನಲ್ಲಿ ತಲಾ ಇಬ್ಬರು, ಮೈಸೂರು, ಬಳ್ಳಾರಿ, ಉತ್ತರ ಕನ್ನಡ,ಬೆಳಗಾವಿ, ತುಮಕೂರು, ಕೋಲಾರ ಹಾಗೂ ಚಿತ್ರದುರ್ಗದಲ್ಲಿ ತಲಾ ಒಬ್ಬರು ಎಚ್1-ಎನ್1ನಿಂದ ಮೃತರಾಗಿದ್ದಾರೆ. ಹಾಗೆಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ 819, ಬೆಂಗಳೂರು ನಗರದಲ್ಲಿ 198, ಮೈಸೂರಿನಲ್ಲಿ 257, ಉಡುಪಿಯಲ್ಲಿ 151, ಶಿವಮೊಗ್ಗದಲ್ಲಿ 137 ಸೇರಿದಂತೆ ರಾಜ್ಯದಲ್ಲಿ 2211 ಮಂದಿ ಎಚ್1-ಎನ್1 ಜ್ವರದಿಂದ ಬಳಲುತ್ತಿದ್ದಾರೆ.
ಆರೋಗ್ಯ ಇಲಾಖೆಯಿಂದ ಈ ವರ್ಷ 6,939 ಮಂದಿಯ ರಕ್ತ ಪರೀಕ್ಷೆ ಮಾಡಿದ್ದು, ಅದರಲ್ಲಿ 1,512 ಮಂದಿಗೆ ಡೇಂಘಿ ಸೋಂಕು ಇರುವುದು ದೃಢಪಟ್ಟಿದೆ. ದಾವಣಗೆರೆಯಲ್ಲಿ 138, ಮೈಸೂರಿನಲ್ಲಿ 170, ಉಡುಪಿಯಲ್ಲಿ 149, ಮಂಡ್ಯದಲ್ಲಿ 102, ಚಿತ್ರದುರ್ಗದಲ್ಲಿ 95 ಪ್ರಕರಣಗಳು ದಾಖಲಾಗಿವೆ. ಚಿಕನ್ ಗುನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ 2,374 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 304 ಮಂದಿಗೆ ಚಿಕನ್‌ಗುನ್ಯಾ ಇರುವುದು ಸಾಬೀತಾಗಿದೆ. ಚಾಮರಾನಗರದಲ್ಲಿ 54, ಚಿತ್ರದುರ್ಗದಲ್ಲಿ 51, ತುಮಕೂರಿನಲ್ಲಿ 37, ಮಂಡ್ಯದಲ್ಲಿ 36 ಹೀಗೆ ವಿವಿಧ ಜಿಲ್ಲೆಗಳಲ್ಲಿ ಐದಾರು ಪ್ರಕರಣ ಪತ್ತೆಯಾಗಿದೆ.
ಮಲೇರಿಯಾಗೆ ಸಂಬಂಧಿಸಿದಂತೆ ಈ ವರ್ಷ 37,68,673 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದ್ದು, 1,672 ಮಂದಿಗೆ ಮಲೇರಿಯಾ ಇರುವುದು ದೃಢಪಟ್ಟಿದೆ. ಅದರಲ್ಲಿ ಉಡುಪಿ ಜಿಲ್ಲೆಯಲ್ಲಿ 111, ದಕ್ಷಿಣ ಕನ್ನಡದಲ್ಲಿ 1046, ಗದಗದಲ್ಲಿ 65, ಕೊಪ್ಪಳದಲ್ಲಿ 59, ಬಾಲಕೋಟೆಯಲ್ಲಿ 50 ಸೋಂಕಿರುವ ಪ್ರಕರಣದ ಪತ್ತೆಯಾಗಿದೆ.