ಅಪರಾಧಿಯೋರ್ವ ಜೈಲಿನಿಂದ ತಪ್ಪಿಸಿಕೊಳ್ಳಲು ಹೋಗಿ ಮರದ ಮೇಲೆ ಸಿಲುಕಿಕೊಂಡಿದ್ದಾನೆ.
ತಿರುವನಂತಪುರಂ: ಪೂಜಾಪ್ಪುರ ಕೇಂದ್ರ ಕಾರಾಗೃಹದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿಯೊಬ್ಬರು ಅಲ್ಲಿಂದ ಪರಾರಿಯಾಗಲು ಹೋಗಿ ಮರದ ಮೇಲೆ ಸಿಲುಕಿಕೊಂಡಿದ್ದಾರೆ.
ಇಂದು ಮಧ್ಯಾಹ್ನ ಪೂಜಾಪುರ ಕೇಂದ್ರ ಕಾರಾಗೃಹದ ಮುಂದೆ ನಾಟಕೀಯ ದೃಶ್ಯಗಳು ಕಂಡು ಬಂದಿವೆ. ಅಪರಾಧಿಯನ್ನು ಸಮಾಧಾನಪಡಿಸಲು ಮೂವರು ಪೊಲೀಸ್ ಸಿಬ್ಬಂದಿ ಮರದ ಮೇಲೆ ಹತ್ತಿದಾಗ, ಅವನು ಮರದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ಆರೋಪಿಯನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಆತ ಕೆಳಗಿಳಿಯಲು ಒಪ್ಪಲಿಲ್ಲ. ಆದರೆ, ಇದ್ದಕ್ಕಿದ್ದಂತೆ ಆತ ಕುಳಿತಿದ್ದ ಕೊಂಬೆ ಮುರಿದು, ಪೊಲೀಸರು ಹಾಕಿದ್ದ ಬಲೆಗೆ ಬಿದ್ದಿದ್ದಾನೆ.
ಜೈಲಿನಿಂದ ತಪ್ಪಿಸಿಕೊಳ್ಳಲು ಹೋಗಿ ಮರದ ಮೇಲೆ ಸಿಲುಕಿದ ಅಪರಾಧಿ
ಬಿದ್ದ ವೇಳೆ ಬಲೆ ಇದ್ದ ಕಾರಣ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾನೆ. ನಂತರ ಆಂಬ್ಯುಲೆನ್ಸ್ನಲ್ಲಿ ಜೈಲಿಗೆ ಕರೆದೊಯ್ಯಲಾಗಿದೆ. ಕೊಟ್ಟಾಯಂ ಮೂಲದ ಸುಭಾಷ್ ಕೊಲೆ ಸೇರಿದಂತೆ ಇತರೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಎರಡು ವಾರಗಳ ಹಿಂದೆ ನೆಟ್ಟುಕಲ್ತೇರಿ ತೆರೆದ ಕಾರಾಗೃಹದಿಂದ ಇಲ್ಲಿಗೆ ಸ್ಥಾಳಾಂತರಿಸಲಾಗಿತ್ತು.