ಲೋಕಸಭೆ ಚುನಾವಣೆಯಲ್ಲಿ ಅಗತ್ಯ ಸೇವೆ: 12 ಇಲಾಖೆ ಸಿಬ್ಬಂದಿಗೆ ಸಿಗಲಿದೆ ಅಂಚೆ ಮತದಾನದ ಅವಕಾಶ

Sampriya

ಬುಧವಾರ, 20 ಮಾರ್ಚ್ 2024 (14:04 IST)
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹನ್ನೆರಡು ಇಲಾಖೆಗಳ ಅಗತ್ಯ ಸೇವೆಗಳ ಗೈರು ಮತದಾರರಿಗೆ ಅಂಚೆ ಮತದಾನ (ಪೋಸ್ಟಲ್ ಬ್ಯಾಲೆಟ್) ವ್ಯವಸ್ಥೆ ಕಲ್ಪಿಸುವ ಸಲುವಾಗಿ ಆಯಾ ಇಲಾಖೆಗಳಿಂದ ಪಟ್ಟಿ ನೀಡಲು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
 
ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ ಸೆಲ್ವಮಣಿ ಅವರು, ಅಗತ್ಯ ಸೇವೆಗಳ ಗೈರು ಮತದಾರರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲು ಆಯಾ ಇಲಾಖೆಗಳಿಂದ ಪಟ್ಟಿ ತಿಳಿಸಿದ್ದಾರೆ.
 
12 ವಿವಿಧ ಇಲಾಖೆಗಳನ್ನು ಚುನಾವಣಾ ಆಯೋಗವು ಅಗತ್ಯ ಸೇವೆಗಳೆಂದು ಪರಿಗಣಿಸಿದೆ. ಅವರು ಅಂಚೆ ಮತದಾನಕ್ಕೆ ಅರ್ಹರಾಗಿದ್ದಾರೆ. ಎವಿಇಎಸ್‌ ಅಡಿಯಲ್ಲಿ ಅರ್ಹ ಮತದಾರರು ಫಾರ್ಮ್ 12ಡಿ ಅನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಶುಕ್ರವಾರದೊಳಗೆ (ಮಾರ್ಚ್ 22) ಸಲ್ಲಿಸಬೇಕು ಎಂದು ಹೇಳಿದರು. 
 
ಮತದಾರರು ನೋಂದಣಿಯಾಗಿರುವ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ ಅಂಚೆ ಮತದಾನ ಕೇಂದ್ರದಲ್ಲಿ ಮಾತ್ರ ಈ ಬಾರಿ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಅಂಚೆ ಮತಪತ್ರಗಳನ್ನು ಅಂಚೆ ಮೂಲಕ ವಿತರಿಸುವ/ ತಲುಪಿಸುವ ವ್ಯವಸ್ಥೆ ಇರುವುದಿಲ್ಲ ಎಂದು ಅವರು ತಿಳಿಸಿದರು.
 
ಅಂಚೆ ಮತದಾನಕ್ಕೆ ಅರ್ಹರು: ಬೆಸ್ಕಾಂ, ಬಿ.ಎಸ್.ಎನ್.ಎಲ್, ರೈಲ್ವೆ ಇಲಾಖೆ, ಮಾಹಿತಿ ಇಲಾಖೆ, ಆಲ್ ಇಂಡಿಯಾ ರೇಡಿಯೋ, ಆರೋಗ್ಯ ಇಲಾಖೆ, ವಾಯುಯಾನ, ರಸ್ತೆ ಸಾರಿಗೆ ನಿಗಮ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಮತದಾನದ ದಿನದಂದು ಚುನಾವಣಾ ಪ್ರಸಾರಕ್ಕಾಗಿ ಭಾರತದ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ಮಾಧ್ಯಮ ವ್ಯಕ್ತಿಗಳು, ಸಂಚಾರ ಪೊಲೀಸ್, ಆಂಬ್ಯುಲೆನ್ಸ್ ಸೇವೆಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ