ಚಿಕಿತ್ಸೆಗೆ ದಾಖಲಾಗಿದ್ದ ಸ್ವಾಮೀಜಿಯೊಬ್ಬರು ಐಸಿಯುನಿಂದ ಹೊರಬಂದು ಆಸ್ಪತ್ರೆ ಆವರಣದಲ್ಲಿ ಬಿದ್ದು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯ ಖಂಡಿಸಿ ಸಂಬಂಧಿಕರು ದಾಂಧಲೆ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಹುಸ್ಕೂರ್ ಗೇಟ್ ನಲ್ಲಿರುವ ಶಸ್ತ್ರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾರಾಯಣ ರೆಡ್ಡಿ ಕಳೆದ ರಾತ್ರಿ ಸಿಬ್ಬಂದಿ ಇಲ್ಲದ ಕಾರಣ ಐಸಿಯು ನಿಂದ ನಡೆದುಕೊಂಡು ಹೊರಗೆ ಬಂದಿದ್ದು, ಅಲ್ಲಿಯೇ ಕುಸಿದು ಸಾವನ್ನಪ್ಪಿದ್ದಾರೆ. ಇದರಿಂದ ರೊಚ್ಚಿಗೆದ್ದ ಸ್ವಾಮಿಜೀ ಸಂಬಂಧಿಗಳು ಆಸ್ಪತ್ರೆಯ ಗಾಜುಗಳನ್ನ ಒಡೆದು ಹೊರಹಾಕಿದ್ದಾರೆ.
ಕೆಲ ದಿನಗಳಿಂದ ಮಧುಮೇಹ ರೋಗದಿಂದ ಬಳಲುತ್ತಿದ್ದ ಸ್ವಾಮೀಜಿ ಎರಡು ದಿನದ ಹಿಂದೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯರ ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುದಾರಣೆ ಸಹ ಕಾಣಿಸಿತ್ತು. ಆದರೆ ಸಂಜೆ ಐಸಿಯುನಲ್ಲಿ ಯಾವುದೇ ಸಿಬ್ಬಂದಿ ಇಲ್ಲದೇ ಇದ್ದಾಗ ನಡೆದುಕೊಂಡು ಹೊರ ಬಂದು ಎಡವಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ವಾಮಿಜೀ ಸಂಬಂಧಿಗಳು ಘಟನೆಯನ್ನು ವಿವರಿಸಿದ್ದಾರೆ.
ಸಂಬಂದಿಕರು ಆಸ್ಪತ್ರೆ ಮುಂಭಾಗ ಜಮಾಯಿಸುತ್ತಿದ್ದಂತೆ ವೈದ್ಯರು ಮತ್ತು ಸಿಬ್ಬಂದಿ ಪರಾರಿಯಾಗಿದ್ದಾರೆ, ನಮ್ಮ ತಂದೆ ಸಾವಿಗೂ ಮುನ್ನ ಚೆನ್ನಾಗಿಯೇ ಮಾತಾನಾಡುತ್ತಿದ್ದರು. ಐಸಿಯುನಿಂದ ಹೊರಬರಲು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವೆಂದು ಮೃತರ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು.